ಪ್ರಮುಖ ಸುದ್ದಿ

ಕನ್ನಡಿಗರ ಸ್ಥಾನಕ್ಕೆ ತಮಿಳರು: ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅಸಮಾಧಾನ

ರಾಜ್ಯ(ಬೆಂಗಳೂರು)ಮಾ.11:-   ಕನ್ನಡಿಗರ ಸ್ಥಾನಕ್ಕೆ ತಮಿಳರನ್ನ ಅಂಪ್ರೆಂಟಿಸ್ ಗಳಾಗಿ ನೇಮಕಮಾಡಿಕೊಂಡಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ   ಟಿ.ಎಸ್. ನಾಗಾಭರಣ ಅವರು ಎಚ್ಚರಿಕೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ ಭೇಟಿ ನೀಡಿ, ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಾಜ್ಯ ಸರ್ಕಾರದ ಉದ್ದಿಮೆಯಾಗಿರುವ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ, ಕೆಐಎಡಿಬಿಯಿಂದ ಅಭಿವೃದ್ದಿ ಪಡಿಸಲಾದ ಭೂಮಿಯನ್ನು ನೀಡಿರುವುದು ಕನ್ನಡಿಗರಿಗೆ ಉದ್ಯೋಗ ದೊರೆಯಲಿ. ಆ ಮೂಲಕ ಕನ್ನಡಿಗರು ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂಬ ಕಾರಣಕ್ಕಾಗಿ. ತಾವು ತಮ್ಮ ಕರ್ತವ್ಯ ಮರೆತು ಕನ್ನಡಿಗರ ಸವಲತ್ತುಗಳನ್ನು ತಮಿಳರಿಗೆ ನೀಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

ಹೀಗೆ ಆಯ್ಕೆಗೊಂಡವರನ್ನು ಕೂಡಲೇ ಬಿಡುಗಡೆಗೊಳಿಸಿ ಕನ್ನಡಿಗರನ್ನು ನೇಮಿಸಿಕೊಳ್ಳಬೇಕು ಮತ್ತು ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ ಖಾಯಂ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರ ಕಾರ್ಮಿಕರಿಗೆ ಸಿಗಬೇಕಾದ ಕಲ್ಯಾಣ ಯೋಜನೆಗಳು ಸಮರ್ಪಕವಾಗಿ ಸಿಗುತ್ತಿಲ್ಲವೆಂಬ ದೂರುಗಳಿದ್ದು, ಕೂಡಲೇ ಈ ಬಗ್ಗೆಯೂ ಕ್ರಮವಹಿಸುವಂತೆ ತಾಕೀತು ಮಾಡಿದರು.

ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ ಕನ್ನಡದ ಗ್ರಂಥಾಲಯವನ್ನು ತೆರೆದು ತಾಂತ್ರಿಕ ಪದಕೋಶ, ಕಾರ್ಮಿಕ ಕಾನೂನು, ಸಂವಿಧಾನದಂತಹ ಪುಸ್ತಕಗಳನ್ನು ಈ ಸಂಸ್ಥೆಯ ನೌಕರರಿಗೆ ಓದಲು ವಿತರಿಸಿದರೆ ಕಾರ್ಮಿಕರಿಗೆ ಕಾನೂನಿನ ಅರಿವು ವಿಸ್ತಾರಗೊಳ್ಳುವ ಜೊತೆಗೆ ಕನ್ನಡ ಅನುಷ್ಠಾನಗೊಳಿಸಿದಂತೆಯೂ ಆಗಲಿದೆ ಎಂದು ಮಾಹಿತಿ ನೀಡಿದ ನಾಗಾಭರಣ ಅವರು, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ನಲ್ಲಿ ಕೆಲಸ ನಿರ್ವಹಿಸಿ ಸಾವನ್ನಪ್ಪಿರುವ ಕಾರ್ಮಿಕರ ಕುಟುಂಬಕ್ಕೆ ದೊರೆಯಬೇಕಾದ ಸೌಲಭ್ಯವನ್ನು ನೀಡದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಅವರು ಮಾತನಾಡಿ, ರಾಜ್ಯ ಸರ್ಕಾರದ ಉದ್ದಿಮೆಗಳಲ್ಲಿ ಶೇ.100ಕ್ಕೆ 100ರಷ್ಟು ಹುದ್ದೆಗಳು ಈ ನೆಲದ ಮಕ್ಕಳಿಗೇ ಸಿಗಬೇಕು ಎನ್ನುವುದು ಈ ನೆಲದ ನೀತಿಯಾಗಿದೆ. ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಕನ್ನಡ ಪರೀಕ್ಷೆಗಳನ್ನು 10ನೇ ತರಗತಿ ಗುಣಮಟ್ಟದಲ್ಲಿ ನೆಡಸಬೇಕು ಮತ್ತು ವೆಬ್ ಸೈಟ್ ನಲ್ಲಿ ಆಯ್ಕೆ ಭಾಷೆಯಾಗಿ ಯಾವ ಭಾಷೆಯನ್ನಾದರೂ ಹಾಕಿ ಆದರೆ ಡಿಫಾಲ್ಟ್ ಭಾಷೆಯಾಗಿ ಕನ್ನಡವೇ ಇರುವಂತೆ ಸಂಸ್ಥೆಯ ಜಾಲತಾಣವನ್ನು ಮರುರೂಪಿಸುವಂತೆ ಸೂಚಿಸಿದರು.

ನಂತರ ಪೀಣ್ಯದ ಕೈಗಾರಿಕಾ ವಲಯದಲ್ಲಿರುವ ತ್ರೀವೇಣಿ ಟರ್ಬಿನ್ ಲಿಮಿಟೆಡ್ ಗೆ ಭೇಟಿನೀಡಿ ಉತ್ಪಾದನಾ ಘಟಕವನ್ನು ಪರಿಶೀಲಿಸಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು, ಇಂಜಿನಿಯರಿಂಗ್ ವಿಭಾಗದಲ್ಲಿ ಕನ್ನಡ ಬಾರದವರು ಇದ್ದಾರೆ. ಈ ಬಗ್ಗೆ ಗಮನ ಹರಿಸಬೇಕು ಮತ್ತು ತ್ರೀವೇಣಿ ಟರ್ಬಿನ್ ಲಿಮಿಟೆಡ್ ಸಂಸ್ಥೆಯ ಉತ್ಪನ್ನಗಳು 70 ದೇಶಗಳಿಗೆ ಸರಬರಾಜಾಗುತ್ತಿರುವುದು ಹೆಮ್ಮೆಯ ವಿಷಯ. ಅದೇ ರೀತಿ ಆ 70 ದೇಶಗಳಲ್ಲೂ ಕನ್ನಡದ ಕಂಪು ಹರಿಸಬೇಕಾದರೆ ತಮ್ಮ ಸಂಸ್ಥೆಯಲ್ಲಿ ಉತ್ಪಾದಿಸಲಾಗುವ ಉತ್ಪನ್ನಗಳ ಮೇಲೆ ಮೇಡ್ ಇನ್ ಕರ್ನಾಟಕ ಎಂದು ಕನ್ನಡದಲ್ಲಿ ಹಾಕಿದರೆ ವಿದೇಶಿಗರಿಗೂ ಕಸ್ತೂರಿ ಕನ್ನಡವನ್ನು ಪಸರಿಸಿದಂತಾಗುತ್ತದೆ ಎಂದು ಹೇಳಿದರು.

ಪರಿಶೀಲನಾ ತಂಡದಲ್ಲಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಕನ್ನಡ ಚಿಂತಕರಾದ ಟಿ.ತಿಮ್ಮೇಶ್, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷರಾದ ಮಾಯಣ್ಣ, ಶಿವಪ್ರಕಾಶ್, ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: