ಮೈಸೂರು

ನಿರ್ಗತಿಕ ಮಕ್ಕಳಿಗೆ ತಾಯಿಯಾಗಿ ಪೊರೆಯುತ್ತಿದೆ ನಿರ್ದಿಷ್ಟ ವರ್ಗದ ಮಕ್ಕಳ ಸರ್ಕಾರಿ ವಸತಿ ಶಾಲೆ

ತಂದೆ, ತಾಯಿಯಿಂದ ದೂರಾಗಿ, ಅರ್ಧದಲ್ಲಿ ಶಾಲೆ ಬಿಟ್ಟು ನಿರ್ಗತಿಕರಾಗಿ, ಶಿಕ್ಷಣದಿಂದ ವಂಚಿತರಾಗಿರುವ ಹಿಂದುಳಿದ ಬಡಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಸತಿಯನ್ನು ಸದ್ದಿಲ್ಲದೆ ನೀಡುತ್ತಿರುವ ಶಾಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿದೆ. ನಿರ್ಗತಿಕ ಮಕ್ಕಳಿಗೆ ತಾಯಿಯ ಮಡಿಲಾಗಿ, ಜ್ಞಾನ ನೀಡುವ ಸರಸ್ವತಿಯಾಗಿ, ಹಸಿವನ್ನು ನೀಗಿಸುವ ಅನ್ನಪೂರ್ಣೇಶ್ವರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ನೂರಾರು ಮಕ್ಕಳು ತಮ್ಮದಲ್ಲದ ತಪ್ಪಿಗೆ, ಯಾರದೋ ಪಾಪಕ್ಕೆ ಜನಿಸಿ ಅನಾಥರಾಗುತ್ತಾರೆ. ಇನ್ನು ಕೆಲವರು ತಂದೆತಾಯಿಯಿದ್ದರೂ ಅನಾಥರಾಗಿರುತ್ತಾರೆ. ಉಳಿದವರು ಬಡತನದ ಬೇಗೆಗೆ ಶಿಕ್ಷಣದಿಂದ ವಂಚಿತರಾಗಿರುತ್ತಾರೆ. ಅಂತಹವರಿಗಾಗಿಯೇ ಈ ನಿರ್ದಿಷ್ಟ ವರ್ಗದ ಮಕ್ಕಳ ಸರ್ಕಾರಿ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿದೆ. ಮೈಸೂರು ಬೆಂಗಳೂರು ರಸ್ತೆಯ ಎನ್.ಆರ್.ಮೊಹಲ್ಲಾದಲ್ಲಿರುವ ಹಳೇ ಡಿಡಿಪಿಐ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಶಾಲೆ ಆರಂಭವಾಗಿದ್ದು 2011ರಲ್ಲಿ. ಶಿಕ್ಷಣದಿಂದ ವಂಚಿತರಾಗುತ್ತಿದ್ದ ನಿರ್ದಿಷ್ಟ ವರ್ಗಗಳ ಅಂದರೆ ಅನಾಥ  ಮಕ್ಕಳು, ಪೋಷಕರಿಂದ ನಿರ್ಲಕ್ಷ್ಯಿಸಲ್ಪಟ್ಟ ಮಕ್ಕಳು, ಲೈಂಗಿಕ ಕಾರ್ಯಕರ್ತರ ಮಕ್ಕಳು, ಬಿಪಿಎಲ್ ಕುಟುಂಬಗಳ ಮಕ್ಕಳು ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತಂದು ಅವರಲ್ಲಿನ ಕಲಿಕಾ ಮಟ್ಟವನ್ನು ಇತರ ಮಕ್ಕಳ ಕಲಿಕಾ ಮಟ್ಟದೊಂದಿಗೆ ಸಮನ್ವಯಗೊಳಿಸುವ ಸದುದ್ದೇಶದಿಂದ ಸರ್ಕಾರ ಸರ್ವಶಿಕ್ಷಣ ಅಭಿಯಾನದ ಯೋಜನೆಯ ಅಡಿಯಲ್ಲಿ ರಾಜ್ಯಾದ್ಯಂತ ನಿರ್ದಿಷ್ಟ ವರ್ಗಗಳ ಮಕ್ಕಳ ಐದು ವಸತಿ ಶಾಲೆಗಳನ್ನು ಆರಂಭಿಸಿತು. ಈ ಐದರಲ್ಲಿ ಮೈಸೂರು ಉತ್ತರ ವಲಯದ ಎನ್.ಆರ್.ಮೊಹಲ್ಲಾದಲ್ಲಿರುವ ಈ ಶಾಲೆಯೂ ಒಂದು. ಆರಂಭದಲ್ಲಿ 1ನೇ ತರಗತಿಯಿಂದಲೂ ಪ್ರವೇಶಾತಿ ನೀಡಲಾಗುತ್ತಿತ್ತು. ಆದರೀಗ 4ನೇ ತರಗತಿಯಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ನೀಡುತ್ತಿದೆ.

2011ರಲ್ಲಿ ನಜರ್‍ಬಾದ್‍ನ ಸರ್ಕಾರಿ ಪ್ರಾಯೋಗಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ಈ ಶಾಲೆ ನಂತರ ಕೆಲ ಮೂಲ ಸೌಕರ್ಯಗಳ ಕೊರತೆಯಿಂದ ದೊಟ್ಟ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಬಳಿಕ ನಜರ್‍ಬಾದ್‍ನ ಸರ್ಕಾರಿ ಮೂಲ ಶಿಕ್ಷಣ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರವಾಯಿತು. ಅಲ್ಲಿಯೂ ಕೆಲ ಮೂಲ ಸೌಕರ್ಯಗಳ ಕೊರತೆಯ ಹಿನ್ನೆಲೆಯಲ್ಲಿ 2013ರಲ್ಲಿ ಎನ್.ಆರ್.ಮೊಹಲ್ಲಾದ ಹಳೇ ಡಿಡಿಪಿಐ ಕಚೇರಿ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 92 ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಊಟ ವಸತಿ ನೀಡುತ್ತಿದೆ. ಈ ಶಾಲೆಗೆ ಸರ್ಕಾರದಿಂದ ಸ್ವಂತ ಕಟ್ಟಡ ಮಂಜೂರಾಗಿದ್ದು ಕಾಮಗಾರಿ ನಡೆಯುತ್ತಿದೆ. ಶಾಲೆಯಲ್ಲಿ 6 ಮಂದಿ ಶಿಕ್ಷಕರಿದ್ದು ಮೂವರು ಇಲಾಖೆಯ ಶಿಕ್ಷಕರಾದರೆ, ಉಳಿದ ಮೂವರು ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಓರ್ವ ಮಹಿಳಾ ನಿಲಯ ಪಾಲಕರು ಹಾಗೂ ಮೂವರು ಹೊರಗುತ್ತಿಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಕ್ಕಳಿಗೆ ದೊರೆಯುವ ಸೌಲಭ್ಯಗಳು

ಈ ಶಾಲೆ ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಸೌಲಭ್ಯಗಳನ್ನು ನೀಡುತ್ತಿದೆ. ಮಕ್ಕಳಿಗೆ ಉಚಿತ ಔಪಚಾರಿಕ ಶಿಕ್ಷಣ, ಪೌಷ್ಠಿಕ ಸಮತೋಲನ ಆಹಾರ, ಸ್ನಾನಕ್ಕೆ ಬಿಸಿನೀರು, ವಸತಿ ಸೌಲಭ್ಯ, ವೈದ್ಯಕೀಯ ಚಿಕಿತ್ಸೆ, ತಿಂಗಳಿಗೆ 100 ರೂಗಳಂತೆ ವಾರ್ಷಿಕ 1200 ರೂ ವಿದ್ಯಾರ್ಥಿ ವೇತನ, ಅಗತ್ಯ ಜೀವನ ಕೌಶಲ ತರಬೇತಿ ಹಾಗೂ ಸಾಮರ್ಥ್ಯ ಅಭಿವೃದ್ಧಿ ತರಬೇತಿ, ಉಚಿತ ಪಠ್ಯಪುಸ್ತಕ ವಿತರಣೆ, ಉಚಿತ ಸಮವಸ್ತ್ರ ವಿತರಣೆ ಸೇರಿದಂತೆ ಜೀವನ ಮೌಲ್ಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು

ನಿರ್ದಿಷ್ಟ ವರ್ಗದ ಮಕ್ಕಳ ಈ ಶಾಲೆ ಕೇವಲ ಪಠ್ಯ ವಿಷಯಕ್ಕೆ ಸೀಮಿತವಾಗಿ ಜೀವನ ನಿರ್ವಹಣೆಗೆ ಬೇಕಾಗುವ ಕೌಶಲಗಳನ್ನೂ ನೀಡುತ್ತಿದೆ. ಕಂಪ್ಯೂಟರ್ ಶಿಕ್ಷಣ, ಸ್ಪೋಕನ್ ಇಂಗ್ಲಿಷ್ ತರಬೇತಿ, ಸಂಗೀತ ಮತ್ತು ನೃತ್ಯ ತರಬೇತಿ, ಹೊಲಿಗೆ ತರಬೇತಿ, ಯೋಗಾಸನ ತರಬೇತಿ, ಕೃತಕ ಆಭರಣ ಮತ್ತು ಗೊಂಬೆಗಳ ತಯಾರಿಕಾ ತರಬೇತಿ, ಕರಾಟೆ ತರಬೇತಿ, ಬಾಲವಿಕಾಸ ಮೌಲ್ಯ ಶಿಕ್ಷಣ ಬೋಧನೆ ಸೇರಿದಂತೆ ವಿವಿಧ ಕೌಶಲಗಳನ್ನು ವೃದ್ಧಿಸುವ ಶಿಕ್ಷಣ ನೀಡುತ್ತಿದೆ.

ಸಿಟಿಟುಡೇ ಶಾಲೆಯ ಕುರಿತ ಮಾಹಿತಿಗಾಗಿ ಮುಖ್ಯಶಿಕ್ಷಕ  ಮಹೇಶ್ ಅವರನ್ನು ಮಾತನಾಡಿಸಿದಾಗ, ನಿರ್ದಿಷ್ಟ ವರ್ಗದ ಮಕ್ಕಳಿಗಾಗಿ ಆರಂಭವಾದ ಈ ಶಾಲೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಲಾಖೆಯ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಪ್ರೋತ್ಸಾಹ ನೀಡುತ್ತಾರೆ. ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯವನ್ನೂ ನೀಡಲಾಗುತ್ತಿದೆ. ಸ್ವಂತ ಕಟ್ಟಡಕ್ಕೆ ಕಾಮಗಾರಿ ನಡೆಯುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಸರ್ಕಾರದ ವತಿಯಿಂದ ಅನುದಾನ ಬಿಡುಗಡೆಯಾಗುತ್ತಿದ್ದು, ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಬಟ್ಟೆ ಎಲ್ಲವನ್ನೂ ನೀಡಲಾಗುತ್ತಿದೆ. 8ನೇ ತರಗತಿ ಪೂರ್ಣಗೊಂಡ ಮಕ್ಕಳನ್ನು ಹಾಸ್ಟೆಲ್‍ಗಳಿಗೆ ಸೇರಿಸುವ ವ್ಯವಸ್ಥೆಯನ್ನು ಶಾಲೆಯಿಂದಲೇ ಮಾಡಲಾಗುತ್ತದೆ. ನಿರ್ಗತಿಕ ಮಕ್ಕಳು, ಶಿಕ್ಷಣದಿಂದ ವಂಚಿತರಾದವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಗತ್ತಿನ ಎಲ್ಲೆಡೆಯೂ ಇಂಥಹವರೇ ಇದ್ದರೆ ಯಾರೂ ಅನಾಥರೆಂದು ಗುರುತಿಸಿಕೊಳ್ಳಲು ಸಾಧ್ಯವೇ ಇಲ್ಲವೇನೋ..!   (ಬಿ.ಎಂ.-ಎಸ್.ಎಚ್)

Leave a Reply

comments

Related Articles

error: