ಮೈಸೂರು

ಅಸ್ಪೃಶ್ಯತೆ ಆಚರಣೆ ಇಲ್ಲದಿದ್ದರೂ ಪ್ರಚಾರದ ಹುಚ್ಚಿಗೆ ಗ್ರಾಮದಲ್ಲಿ ಅಪಪ್ರಚಾರ ಮಾಡಿ ಅಶಾಂತಿಗೆ ಕಾರಣರಾದವರ ವಿರುದ್ಧ ಕ್ರಮ : ತಹಶೀಲ್ದಾರ್ ಮಹೇಶ್ ಕುಮಾರ್ ಎಚ್ಚರಿಕೆ

ಮೈಸೂರು,ಮಾ.11:-  ಎರಡು ದಿನಗಳ ಹಿಂದೆ  ಗ್ರಾಮದ ವ್ಯಕ್ತಿಯೋರ್ವ ಪ್ರಚಾರದ ಹುಚ್ಚಿಗೆ ನಗರ್ಲೆ ಗ್ರಾಮದಲ್ಲಿ ಅಸ್ಪೃಶ್ಯತೆ ಜೀವಂತ ಎಂದು ಅಪಪ್ರಚಾರ ಮಾಡಿದ್ದು,  ಮಾಧ್ಯಮದಲ್ಲಿ ವರದಿಯಾಗುತ್ತಲೇ  ನಗರ್ಲೆ ಗ್ರಾಮಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿದೆ. ನಂಜನಗೂಡಿನ ತಹಶೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿದರು.

ಮೈಸೂರಿನ ಜಾರಿ ನಿರ್ದೇಶನಾಲಯದ ಡಿವೈಎಸ್ಪಿ ಗಂಗಾಧರಪ್ಪ ಮತ್ತು ಇತರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ನಗರ್ಲೆ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗ್ರಾಮಸ್ಥರ ಜೊತೆಗೂಡಿ ಸಭೆ ನಡೆಸಿದರು. ಅಸ್ಪೃಶ್ಯತೆ ಜೀವಂತವಾಗಿದೆ ಎಂದು ಪ್ರಚಾರದ ಹುಚ್ಚಿಗೆ ಅಪಪ್ರಚಾರ ಮಾಡಿದ ವ್ಯಕ್ತಿ ಅಧಿಕಾರಿಗಳ ಭೇಟಿ ಸಮಯದಲ್ಲಿ ನಾಪತ್ತೆಯಾಗಿದ್ದ ಎನ್ನಲಾಗಿದೆ. ನಗರ್ಲೆ ಗ್ರಾಮದಲ್ಲಿ ಎಲ್ಲ ವರ್ಗದ ಜನರು ತುಂಬಾ ಶಾಂತಿ ಮತ್ತು ಸಹಬಾಳ್ವೆಯಿಂದ ಸಹೋದರರಂತೆ ಜೀವನ ಸಾಗಿಸುತ್ತಿದ್ದೇವೆ. ನಗರ್ಲೆ ಗ್ರಾಮದ ಹೋಟೆಲ್, ಕ್ಷೌರಿಕ ಅಂಗಡಿ, ಇನ್ನಿತರ ಯಾವುದೇ ಸ್ಥಳಗಳಲ್ಲಿ ಯಾವುದೇ ಅಸ್ಪೃಶ್ಯತೆ ಆಚರಣೆ ಇಲ್ಲ. ಆ ರೀತಿ ಏನಾದರೂ ಕಂಡುಬಂದಲ್ಲಿ ನಾವೇ ಪೊಲೀಸರು ಮತ್ತು ತಹಶೀಲ್ದಾರ್ರ ಗಮನಕ್ಕೆ ತರುತ್ತೇವೆ. ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಯಾವುದೋ ವ್ಯಕ್ತಿಯೊಬ್ಬ  ಈ ರೀತಿ ಗ್ರಾಮದಲ್ಲಿ ಅಶಾಂತಿ ನಿರ್ಮಾಣ ಮಾಡುವುದು ಸರಿಯಲ್ಲ ಎಂದು ನಗರ್ಲೆ ಗ್ರಾಮದ ಗ್ರಾಮಸ್ಥರು ಭೇಟಿ ನೀಡಿದ  ಅಧಿಕಾರಿಗಳಿಗೆ ತಿಳಿಸಿದರು.

ತಹಶೀಲ್ದಾರ್ ಮಹೇಶ್ ಕುಮಾರ್ ಮಾತನಾಡಿ ಆಧುನಿಕ ಯುಗದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಆಚರಣೆ ಕಂಡುಬಂದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಕಾನೂನಿನ ಪ್ರಕಾರ ಏನು ಶಿಕ್ಷೆ ಆಗುತ್ತದೆ ಅದನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಅಸ್ಪೃಶ್ಯತೆ ಆಚರಣೆ ಇಲ್ಲದಿದ್ದರೂ ಪ್ರಚಾರದ ಹುಚ್ಚಿಗೆ ಗ್ರಾಮದಲ್ಲಿ ಅಪಪ್ರಚಾರ ಮಾಡಿ ಅಶಾಂತಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಭೆಯಲ್ಲಿ ಎಚ್ಚರಿಸಿದರು.

ಮೈಸೂರಿನ ಜಾರಿ ನಿರ್ದೇಶನಾಲಯದ ಡಿವೈಎಸ್ಪಿ ಗಂಗಾಧರಪ್ಪ ಮಾತನಾಡಿ ನಗರ್ಲೆ ಗ್ರಾಮದಲ್ಲಿ ಯಾರೊಬ್ಬರಿಗೂ ಕಾಣದ ಅಸ್ಪೃಶ್ಯತೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ ವ್ಯಕ್ತಿಗೆ ಕಂಡಿರಬಹುದು ಅದನ್ನು ತಪ್ಪು ಎಂದು ಭಾವಿಸಿ ಮತ್ತೆ ಗ್ರಾಮದಲ್ಲಿ ಘರ್ಷಣೆ ಮಾಡಿಕೊಂಡರೆ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ಸತ್ಯ ಅಸತ್ಯವನ್ನು ಪರಿಶೀಲನೆ ಮಾಡುವ ಸಲುವಾಗಿ ನಾವು ಅಧಿಕಾರಿಗಳಾಗಿ ಗ್ರಾಮಕ್ಕೆ ಆಗಮಿಸಿದ್ದೇವೆ. ಗ್ರಾಮದಲ್ಲಿ ನೀವೇ ಹೇಳಿದಂತೆ ಶಾಂತಿ, ಸಹಬಾಳ್ವೆ ಮತ್ತು ಸಹೋದರತೆಯಿಂದ ಬದುಕುವುದು ಉತ್ತಮ ಎಂದು  ಈ ಸಂದರ್ಭದಲ್ಲಿ ತಿಳಿಸಿದರು.

ತಹಶೀಲ್ದಾರ್ ಮಹೇಶ್ ಕುಮಾರ್, ಮೈಸೂರಿನ ಜಾರಿ ನಿರ್ದೇಶನಾಲಯದ ಗಂಗಾಧರಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜನಾರ್ದನ್, ವೃತ್ತ ನಿರೀಕ್ಷಕ ರಾಜಶೇಖರ್ ಬೆಳಗೆರೆ, ಪಿಎಸ್ಐ ಯಶ್ವಂತ್ ಕುಮಾರ್, ವ್ಯವಸ್ಥಾಪಕ ನಾಗರಾಜ್, ನಗರ್ಲೆ ಗ್ರಾಮದ ಯಜಮಾನರು ಮತ್ತು ಇತರೆ ಮುಖಂಡರು ಸಭೆಯಲ್ಲಿ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: