
ದೇಶಪ್ರಮುಖ ಸುದ್ದಿ
ಕೊರೊನಾ ವೈರಸ್: ಭಾರತದಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆ
ನವದೆಹಲಿ,ಮಾ.12-ನೋಯ್ಡಾ ಮೂಲದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ. ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ.
ಸೋಂಕಿಗೊಳಗಾಗಿರುವ ವ್ಯಕ್ತಿ ಪ್ರವಾಸಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಾರೆ. ವ್ಯಕ್ತಿಗೆ ಸೋಂಕು ತಗುಲಿರುವುದನ್ನು ದೆಹಲಿಯ ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರ (ಎನ್ ಸಿಡಿಸಿ) ದೃಢಪಡಿಸಿದೆ.
ಇಟಲಿಯಿಂದ ಬಂದಿದ್ದ ವ್ಯಕ್ತಿಯೊಬ್ಬರು ಆಗ್ರಾ ಹಾಗೂ ಜೈಪುರಕ್ಕೆ ಭೇಟಿ ನೀಡಿದ್ದು, ಇವರೊಂದಿಗೆ ಇದ್ದ ಪರಿಣಾಮ ಈ ವ್ಯಕ್ತಿಗೂ ಕೂಡ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ವ್ಯಕ್ತಿ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇದೀಗ ಆತನ ಕುಟುಂಬಸ್ಥರನ್ನೂ ಪರೀಕ್ಷೆಗೊಳಪಡಿಸಲಾಗಿದ್ದು, ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. (ಎಂ.ಎನ್)