ಕರ್ನಾಟಕಪ್ರಮುಖ ಸುದ್ದಿ

ಉಪಚುನಾವಣೆಯಲ್ಲಿ ಗೆಲ್ಲಲ್ಲು ನಮ್ಮದೇ ರಣತಂತ್ರ ರೂಪಿಸಿದ್ದೇವೆ : ಗೃಹಸಚಿವ ಜಿ. ಪರಮೇಶ್ವರ್

ಬೆಂಗಳೂರು: ಉಪಚುನಾವಣೆಗೆ ನಮ್ಮದೇ ಆದ ರಣತಂತ್ರ ಮಾಡಿಕೊಂಡಿದ್ದೇವೆ. ಒಂದೆರಡು ದಿನದಲ್ಲಿ ನಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಗೃಹಸಚಿವ ಡಾಕ್ಟರ್ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಎರಡೂ ಕ್ಷೇತ್ರಗಳಿಗೆ ಚುನಾವಣೆ ಉಸ್ತುವಾರಿಯಾಗಿ ಒಬ್ಬ ಮಂತ್ರಿಯನ್ನು ನೇಮಕ ಮಾಡುತ್ತೇವೆ. ಗುಂಡ್ಲುಪೇಟೆಯ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಾಗೂ ನಂಜನಗೂಡಿನ ಆರು ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ತಲಾ ಒಬ್ಬಬ್ಬ ಸಚಿವರನ್ನ ನೇಮಕ ಮಾಡಲಾಗುವುದು. ಪ್ರತಿ ಪಂಚಾಯತಿಗೂ ಒಬ್ಬ ಕೆಪಿಸಿಸಿ ಪದಾಧಿಕಾರಿ ನೇಮಕ ಮಾಡಲಾಗಿದೆ. ಇದರ ಜೊತೆ ಕೆಪಿಸಿಸಿಯ ಎಲ್ಲ 14 ವಿಭಾಗಗಳನ್ನೂ ಬಳಿಸಿಕೊಂಡಿದ್ದೇವೆ. ವಿಧಾನಪರಿಷತ್ ಕಾಂಗ್ರೆಸ್‍ ಸದಸ್ಯರು ಕೂಡ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತನ ಕೊಲೆ: ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ

ಆನೇಕಲ್‍ನಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ಆರೋಪಿಗಳಿದ್ದರೂ ಅವರನ್ನು ಬಂಧಿಸಿ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವರು ತಿಳಿಸಿದರು.

ಬಿಜೆಪಿ ಕಾರ್ಯಕರ್ತ ಕೊಲೆ ಆಗಿದ್ದಾನೆ ಎಂದು ಈ ಪ್ರಕರಣವನ್ನು ನಿರ್ಲಕ್ಷ ಮಾಡುವುದಿಲ್ಲ. ಈ ಹಿಂದೆ ಕಾಂಗ್ರೆಸ್, ಜೆಡಿಎಸ್ ಸದಸ್ಯರೂ ಸಹ ಕೊಲೆಯಾಗಿದ್ದಾರೆ. ಯಾರೇ ಆದರೂ ನಿಷ್ಪಕ್ಷಪಾತ ತನಿಖೆ ನಡೆಯುತ್ತದೆ. ಇದ್ರಲ್ಲಿ ರಾಜಕೀಯ ಮಾಡಲಾಗದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಎರಡೂ ಕ್ಷೇತ್ರಗಳ ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯೂ ಅಲ್ಲ. ಮಾನದಂಡವೂ ಅಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷತೆ ಬಗ್ಗೆ ಹೈಕಮಾಂಡ್ ನಿರ್ಧಾರ :

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಹೈ ಕಮಾಂಡ್ ತೀರ್ಮಾನ ಮಾಡಲಿದೆ. ಹೈ ಕಮಾಂಡ್ ಹೇಳಿದಂತೆ ನಾವು ಕೇಳುತ್ತೇವೆ. ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಿದರೆ ಒಪ್ಪಿಕೊಳ್ಳುತ್ತೇವೆ. ನೀವೇ ಮುಂದುವರೆಯಿರಿ ಎಂದರೆ ನಾನು ಅಧ್ಯಕ್ಷನಾಗಿ ನನ್ನ ಜವಾಬ್ದಾರಿ ಮುಂದುವರೆಸುತ್ತೇನೆ ಎಂದರು.

ಟಿಜಿಎಸ್ ವಂಚನೆ ವಿರುದ್ಧ ಕಠಿಣ ಕ್ರಮ :

ಐದು ಸಾವಿರ ಜನರಿಗೆ ಮೋಸ ಮಾಡಿದ್ರೆ ಸುಮ್ಮನೆ ಇರಲು ಸಾಧ್ಯವೇ? ಟಿಜಿಎಸ್ ವಂಚನೆ ಪ್ರಕರಣದಲ್ಲಿ ಸಚಿನ್ ನಾಯ್ಕ್ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.

(ಎಸ್‍.ಎನ್‍/ಎನ್‍.ಬಿ.ಎನ್‍)

Leave a Reply

comments

Related Articles

error: