ಕರ್ನಾಟಕಪ್ರಮುಖ ಸುದ್ದಿ

ದುಬಾರಿ ವಾಚ್‍ ವಿವಾದ : ಮುಖ್ಯಮಂತ್ರಿಗೆ ಎಸಿಬಿಯಿಂದ ಕ್ಲೀನ್‍ಚಿಟ್‍

ಬೆಂಗಳೂರು : ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್‍ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯೂಬ್ಲಾಟ್ ವಾಚ್ ಖರೀದಿ ಪ್ರಕರಣದಿಂದ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಎಸಿಬಿ ಅಧಿಕಾರಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಹ್ಯೂಬ್ಲೆಟ್ ವಾಚ್‍ ಸಿದ್ದರಾಮಯ್ಯ ಅವರಿಗೆ ಅವರ ಸ್ನೇಹಿತ ದುಬೈ ಮೂಲದ ಡಾ. ಗಿರೀಶ್‍ಚಂದ್ರ ವರ್ಮ ಅವರು ನೀಡಿರುವುದಾಗಿ ಎಸಿಬಿ ಮುಂದೆ ಹೇಳಿದ್ದರು.

ಮುಖ್ಯಮಂತ್ರಿಗಳು 70 ಲಕ್ಷ ರೂ. ಮೌಲ್ಯದ ವಜ್ರ ಖಚಿತ ಹ್ಯೂಬ್ಲೆಟ್ ವಾಚ್ ಧರಿಸಿದ್ದರ ಸಂಬಂಧ ವಕೀಲ ನಟರಾಜ ಶರ್ಮ, ಆರ್.ಟಿ.ಐ ಕಾರ್ಯಕರ್ತ ರಾಮಮೂರ್ತಿ ಗೌಡ ಮತ್ತು ಟಿ.ಜೆ ಅಬ್ರಹಾಂ ಅವರು ಪ್ರತ್ಯೇಕವಾಗಿ ಎಸಿಬಿಯಲ್ಲಿ ದೂರು ದಾಖಲಿಸಿದ್ದರು.

ದೂರು ಸ್ವೀಕರಿಸಿದ ನಂತರ ಎಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಸಿಎಂ ಸ್ನೇಹಿತ ಡಾ.ಗಿರೀಶ್ ಚಂದ್ರವರ್ಮಾ ಅವರು ಎಸಿಬಿ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದು, “ನಾನು ಸಿ.ಎಂ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ನನ್ನ ಹ್ಯೂಬ್ಲೆಟ್ ವಾಚ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾನು ವಾಚ್ ಅನ್ನು ಸಿದ್ದರಾಮಯ್ಯ ಅವರಿಗೆ ಗಿಫ್ಟ್ ನೀಡಲು ಮುಂದಾದೆ. ಆದರೆ ಅದನ್ನು ತೆಗೆದುಕೊಳ್ಳಲು ಸಿಎಂ ನಿರಾಕರಿಸಿದ್ದರು. ನಾನೇ ಒತ್ತಾಯಪೂರ್ವಕವಾಗಿ ನೀಡಿದ್ದೆ” ಎಂದು ಹೇಳಿಕೆ ದಾಖಲಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

(ಎಸ್‍.ಎನ್‍/ಎನ್‍.ಬಿ.ಎನ್)

Leave a Reply

comments

Related Articles

error: