ಮೈಸೂರು

ಕೊರೋನಾ ಸೋಂಕಿಗೆ ಅಷ್ಟೊಂದು ಆತಂಕ ಪಡಬೇಕಾಗಿಲ್ಲ, ಮುನ್ನೆಚ್ಚರಿಕೆ ವಹಿಸಿದರೆ ಅದರಿಂದ ದೂರ ಇರಬಹುದು : ಕ್ಲಿನಿಕ್‍ಗಳ ಸಂಘದ ಪದಾಧಿಕಾರಿಗಗಳಿಂದ ಸುದ್ದಿಗೋಷ್ಠಿ

ಮೈಸೂರು,ಮಾ.13:- ಯಾರೋ ಐಟಿ ಉದ್ಯೋಗಿಗಳು, ಶ್ರೀಮಂತರು ಮೊದಲಾದವರು ವಿದೇಶಕ್ಕೆ ಹೋಗಿ ವಾಪಸ್ಸಾಗುವಾಗ, ಪ್ರವಾಸಿಗಳು ಇಲ್ಲಿಗೆ ಬಂದಾಗ ಹರಡಿದ ಕೊರೋನಾ ಸೋಂಕು ಒಂದು ವೇಳೆ ಇಲ್ಲಿನ ಸಾಮಾನ್ಯ ಬಡ ವ್ಯಕ್ತಿಗೆ ಅಂಟಿದಲ್ಲಿ ಆತ ಚಿಕಿತ್ಸೆಗಾಗಿ ಲಕ್ಷಾಂತರ ರೂ.ಗಳನ್ನು ತಪ್ಪು ತನ್ನದಲ್ಲದಿದ್ದರೂ ಏಕೆ ಭರಿಸಬೇಕೆಂಬ ಪ್ರಶ್ನೆಗೆ ಮೈಸೂರು ಆಸ್ಪತ್ರೆ, ನರ್ಸಿಂಗ್ ಹೋಂ ಡಯಾಗ್ನಸ್ಟಿಕ್ ಮತ್ತು ಕ್ಲಿನಿಕ್‍ಗಳ ಸಂಘದ ಪದಾಧಿಕಾರಿಗಳು ಅಸಹಾಯಕರಾಗಿ ಉತ್ತರಿಸಿದ ಘಟನೆ ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ನಡೆಯಿತು.

ಕೊರೋನಾ ಸೋಂಕಿಗೆ ಅಷ್ಟೊಂದು ಆತಂಕ ಪಡಬೇಕಾಗಿಲ್ಲ, ಮುನ್ನೆಚ್ಚರಿಕೆ ವಹಿಸಿದರೆ ಅದರಿಂದ ದೂರ ಇರಬಹುದು ಎಂಬ ಬಗ್ಗೆ ಅರಿವು ಮೂಡಿಸಲು ಈ ಸುದ್ದಿಗೋಷ್ಠಿ ಕರೆಯಲಾಗಿತ್ತು.

ಈ ವೇಳೆ, ಕೊರೋನಾಗೆ ಅತ್ಯಾಧುನಿಕ ಸೌಲಭ್ಯದ ಚಿಕಿತ್ಸೆ ನೀಡಬೇಕಾದ ಹಿನ್ನೆಲೆಯಲ್ಲಿ ಖರ್ಚು ಸಾಮಾನ್ಯ ರೀತಿಯದ್ದಾಗಿರುವುದಿಲ್ಲ. ಆದರೆ ಆರೋಗ್ಯ ವಿಮೆ ಮೂಲಕ ವೆಚ್ಚ ಭರಿಸಬಹುದಾಗಿದೆ ಎಂಬ ಉತ್ತರ ಪ್ರಶ್ನೆಯೊಂದಕ್ಕೆ ಬಂತು.

ಪತ್ರಕರ್ತರು ಈ ಸಂದರ್ಭದಲ್ಲಿ, ಐಟಿ ಉದ್ಯೋಗಿಗಳು, ಯಾತ್ರೆ ಕೈಗೊಳ್ಳುವವರು ವಿದೇಶ ಪ್ರವಾಸ ಕೈಗೊಂಡ ಕಾರಣ, ವಿದೇಶೀ ಪ್ರವಾಸಿಗರು ಇಲ್ಲಿಗೆ ಬಂದ ಕಾರಣ ಇಲ್ಲಿಯದಲ್ಲದ ಕೊರೋನಾ ಸೋಂಕು ಇಲ್ಲಿ ಕಾಣಿಸಿಕೊಂಡಿದೆ. ಆದರೆ ಈ ರೀತಿಯ ಐಷಾರಾಮಿ ಜೀವನದ ಅರಿವೇ ಇಲ್ಲದ ಇಲ್ಲಿನ ಬಡವನೊಬ್ಬನಿಗೆ ಒಂದು ವೇಳೆ ಕೊರೋನಾ ತನ್ನದಲ್ಲದ ತಪ್ಪಿನಿಂದ ಸೋಂಕಿದಲ್ಲಿ ಆತ ಅಷ್ಟು ದುಬಾರಿ ವೆಚ್ಚವನ್ನು ಏಕೆ ಭರಿಸಬೇಕು, ಆತನ ಚಿಕಿತ್ಸಾ ವೆಚ್ಚ ಪೂರ್ಣ ಸರ್ಕಾರದ ಹೊಣೆಯಲ್ಲವೇ ಎಂಬ ಪ್ರಶ್ನೆಗೆ, ಈ ಪ್ರಶ್ನೆಗೆ ತಾವು ಉತ್ತರಿಸಲಾಗುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿದ್ದವರು ನಿರುತ್ತರರಾಗಿ ಪ್ರತಿಕ್ರಿಯಿಸಿದರು.

ಬಳಿಕ, ಕೊರೋನಾ ಸೋಂಕಿನ ಬಗ್ಗೆ ಅಷ್ಟಾಗಿ ಆತಂಕ ಪಡಬೇಕಾದ ಅಗತ್ಯವಿಲ್ಲ. ಏಕೆಂದರೆ ಈ ಸೋಂಕಿನ ಸರಾಸರಿ ಸಾವಿನ ಪ್ರಮಾಣ ಕೇವಲ ಶೇ. ಮೂರರಷ್ಟಿದೆ. ಕೆಲವೊಂದು ಸಾಮಾನ್ಯ ಮುನ್ನೆಚ್ಚರಿಕೆ ವಹಿಸಿದರೆ ಸೋಂಕು ತಗುಲುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.

ಅಲ್ಲದೆ, ಮಕ್ಕಳು, ವೃದ್ಧರು, ಸಕ್ಕರೆ ಕಾಯಿಲೆ ರೋಗಿಗಳು, ಕ್ಯಾನ್ಸರ್ ನಿರೋಧಕ ಔಷಧಿ ಸೇವಿಸುತ್ತಿರುವವರಿಗೆ ಹೆಚ್ಚಿನ ಅನಾಹುತ ಉಂಟು ಮಾಡುವ ಕಾರಣದಿಂದ ಇವರು ಹೆಚ್ಚು ಜಾಗರೂಕರಾಗಿರಬೇಕೆಂದು ಎಚ್ಚರಿಸಿದರು.

ಜೊತೆಗೆ, ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು, ಉಸಿರಾಟದ ತೊಂದರೆ ಕಾಣಿಸಿಕೊಂಡಲ್ಲಿ ತಡಮಾಡದೇ ಕೂಡಲೇ ತಪಾಸಣೆಗೆ ಒಳಗಾಗಬೇಕೆಂದು ಸಲಹೆ ನೀಡಿದರು.

ಇದೇ ವೇಳೆ, ಯಾವೊಬ್ಬ ವೈದ್ಯನೇನಾದರೂ ಸಣ್ಣ ತಪ್ಪು ಮಾಡಿದರೂ ದೊಡ್ಡ ವಿಷಯ ಮಾಡುವ ಜನರು, ಕೊರೋನಾದಂತಹ ವೇಳೆ ತನಗೇ ಅದರ ಸೋಂಕು ತಗುಲುವ ಸಾಧ್ಯತೆ ಇದ್ದರೂ ರೋಗಿಯನ್ನು ನಿರಾಕರಿಸದೇ ಪ್ರಾಣವನ್ನೇ ಪಣಕ್ಕಿಟ್ಟು ಚಿಕಿತ್ಸೆ ನೀಡುವ ವೈದ್ಯರ ಸೇವೆ ಇಂತಹ ಸಂದರ್ಭಗಳಲ್ಲಿ ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಡಾ.ಎಸ್.ಪಿ. ಯೋಗಣ್ಣ, ಡಾ. ಪ್ರಸನ್ನಶಂಕರ್, ಡಾ. ನಯೀಮ್ ಜಾವೀದ್, ಡಾ. ಮುದಾಸ್ಸಿರ್ ಖಾನ್, ಡಾ. ಅಮೃತ, ಡಾ. ಚಲುವರಾಜು ಇದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: