ಮೈಸೂರು

ಆಡಳಿತವನ್ನು ಪಾರದರ್ಶಕ ಮತ್ತು ಜನಸ್ನೇಹಿಯಾಗಿಸಬೇಕೆಂಬ ಉದ್ದೇಶ ಸಾಕಾರಗೊಳಿಸಲು ‘ಮೈ ಕ್ಲೀನ್ ಸಿಟಿ’ ಆ್ಯಪ್ ನ ಹೊಸ ಆವೃತ್ತಿ ಬಿಡುಗಡೆ

ಮೈಸೂರು,ಮಾ.13:- ಆಡಳಿತವನ್ನು ಪಾರದರ್ಶಕ ಮತ್ತು ಜನಸ್ನೇಹಿಯಾಗಿಸಬೇಕೆಂದು ಮೈಸೂರು ಮಹಾನಗರ ಪಾಲಿಕೆಯ ಉದ್ದೇಶವಾಗಿದ್ದು ಈ ಉದ್ದೇಶ ಸಾಕಾರಗೊಳಿಸಲು ‘ಮೈ ಕ್ಲೀನ್ ಸಿಟಿ’ ಆ್ಯಪ್ ನ ಹೊಸ ಆವೃತ್ತಿಯನ್ನಿಂದು ಬಿಡುಗಡೆ ಮಾಡಲಾಯಿತು.

ಪಾಲಿಕೆಯ ಕಛೇರಿ ಸಭಾಂಗಣದಲ್ಲಿ ಮೇಯರ್ ತಸ್ನೀಂ ಹೊಸ ಆವೃತ್ತಿಯ ಆ್ಯಪ್ ನ್ನು  ಬಿಡುಗಡೆಗೊಳಿಸಿದರು. ಈ ಸಂದರ್ಭ ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ಮಾತನಾಡಿ ಗೂಗಲ್ ಪ್ಲೇ ಸ್ಟೋರ್ ಮೂಲಕ My Clean City-Mysuru ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದರು. ಹೊಸ ಆವೃತ್ತಿಯಲ್ಲಿ ಹಲವು ಜನಸ್ನೇಹಿ ಅಂಶಗಳನ್ನು ಸೇರಪಡೆಗೊಳಿಸಲಾಗಿದ್ದು, ಹಿಂದಿನ ಆವೃತ್ತಿಯಲ್ಲಿ ಗುಂಡಿ ಬಿದ್ದಿರುವ ರಸ್ತೆ, ಘನತ್ಯಾಜ್ಯ ವಿಲೇವಾರಿ, ಬೀದಿದೀಪ ಸಮಸ್ಯೆ, ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ, ಫುಟ್ ಪಾತ್ ಅಥವಾ ಪಾಲಿಕೆ ಆಸ್ತಿ ಒತ್ತುವರಿ ಪ್ರಾಣಿಗಳ ಹಾವಳಿ ಕುರಿತು ದೂರುಗಳನ್ನು ನೀಡಬಹುದಿತ್ತು. ಇದೀಗ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಕುರಿತು ದೂರುಗಳನ್ನು ನೀಡಬಹುದು ಎಂದರು.

ಪಾಲಿಕೆಯು ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವ ಗುರಿ ಹೊಂದಿದ್ದು ಇದಕ್ಕೆ ಪೂರಕವಾಗಿ ‘ಮೈ ಕ್ಲೀನ್ ಸಿಟಿ’ ಆ್ಯಪ್ ನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ನಾಗರಿಕರು ನಿಷೇಧಿತ ಪ್ಲಾಸ್ಟಿಕ್ ಬಳಕೆ ಕುರಿತು ದೂರು ನೀಡಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ತೆರಳಿ ನಿಷೇಧಿತ ಪ್ಲಾಸ್ಟಿಕ್ ಬಳಕೆದಾರರ ವಿರುದ್ಧ ಕ್ರಮ ಜರುಗಿಸುವರು. ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ಜನರು ನಗರ ಪಾಲಿಕೆಯೊಂದಿಗೆ ಕೈಜೋಡಿಸಲು ಈ ಆ್ಯಪ್ ಸಹಕಾರಿಯಾಗಿದೆ ಎಂದರು. ಹೊಸ ಆವೃತ್ತಿಯಲ್ಲಿ ದೂರು ನೇರವಾಗಿ ವಾರ್ಡ್ ಅಧಿಕಾರಿಗೆ ತಲುಪುತ್ತದೆ. ಹೀಗಾಗಿ ನಾಗರಿಕರ ಸಮಸ್ಯೆಗಳಿಗೆ ಮತ್ತಷ್ಟು ವೇಗವಾಗಿ ಪರಿಹಾರ ನೀಡಬಹುದು. ಪ್ರತಿಯೊಂದು ಮಸ್ಯೆಗಳನ್ನು ಪರಿಹರಿಸಲು ನಿಗದಿತ ಕಾಲಮಿತಿ ನಿಗದಿಪಡಿಸಲಾಗಿದ್ದು ನಿಗದಿತ ಸಮಯದೊಳಗೆ ಸಮಸ್ಯೆ ಬಗೆಹರಿಸದೇ ಇದ್ದರೆ ವಲಯ ಅಧಿಕಾರಿ ಸೂಕ್ತ  ಕ್ರಮ ಕೈಗೊಳ್ಳುತ್ತಾರೆ. ವಲಯ ಅಧಿಕಾರಿ ಹಂತದಲ್ಲೂ ಸಮಸ್ಯೆ ಬಗೆಹರಿಯದಿದ್ದರೆ ಇಲಾಖಾಧಿಕಾರಿ, ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.

ಈ ಸಂದರ್ಭ ಉಪಮೇಯರ್ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: