ಕರ್ನಾಟಕಪ್ರಮುಖ ಸುದ್ದಿ

ಗೂಗಲ್ ಸಂಸ್ಥೆಯ ಉದ್ಯೋಗಿಯ ಪತ್ನಿಗೂ ಕೊರೊನಾ ವೈರಸ್

ಬೆಂಗಳೂರು,ಮಾ.14-ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವ ಗೂಗಲ್ ಸಂಸ್ಥೆಯ ಉದ್ಯೋಗಿಯ ಪತ್ನಿಯಲ್ಲೂ ಕೊರೊನಾ ವೈರಸ್ ಇರುವುದು ಪರೀಕ್ಷೆಯ ಮೂಲಕ ದೃಢಪಟ್ಟಿದೆ.

ಇವರಿಬ್ಬರು ಹನಿಮೂನ್ ಗೆಂದು ಗ್ರೀಸ್ ಗೆ ತೆರಳಿದ್ದರು. ಅಲ್ಲಿಂದ ಬಂದ ಟೆಕ್ಕಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ಮಾಡಿದ ಬಳಿಕ ಕೊರೊನಾ ವೈರಸ್ ಇರುವುದು ದೃಢಪಟ್ಟಿತು. ಟೆಕ್ಕಿಯಲ್ಲಿ ವೈರಸ್ ಇರುವುದರಿಂದ ಪತ್ನಿಯನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಆಕೆಯಲ್ಲೂ ವೈರಸ್ ಇರುವುದು ದೃಢಪಟ್ಟಿದೆ.

ಹನಿಮೂನ್ ಮುಗಿಸಿ ಬಂದ ಟೆಕ್ಕಿ ಬೆಂಗಳೂರಿನಲ್ಲಿ ತನ್ನ ಉದ್ಯೋಗಕ್ಕೆ ಸೇರಿಕೊಂಡಿದ್ದರೆ, ಪತ್ನಿ ಆಗ್ರಾಕ್ಕೆ ಹೋಗಿದ್ದಳು. ಟೆಕ್ಕಿಯ ರಕ್ತದ ಮಾದರಿಯಲ್ಲಿ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಉತ್ತರ ಪ್ರದೇಶ ಸರ್ಕಾರಕ್ಕೆ ಮಾಹಿತಿ ನೀಡಿತ್ತು.

ಲ್ಯಾಬ್ ವರದಿಯಲ್ಲಿ ಆಕೆಗೆ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೆ ಆಕೆಯ ಪೋಷಕರನ್ನು ಸಂಪರ್ಕಿಸಿದಾಗ ದೆಹಲಿಯನ್ನು ಮಗಳು ತೊರೆದಿದ್ದಾಳೆ ಎಂದು ತಿಳಿಸಿದ್ದರು. ಬಳಿಕ ಆಗ್ರಾಕ್ಕೆ ಪೊಲೀಸರ ಜೊತೆ ವೈದ್ಯರ ತಂಡ ತೆರಳಿ ಆಕೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇವಲ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದ ಈಕೆಯನ್ನು ಸಂಪರ್ಕಿಸಿ ರಕ್ತದ ಮಾದರಿಯನ್ನು ಪಡೆದು ಪ್ರತ್ಯೇಕ ನಿಗಾದಲ್ಲಿ ಇಡಲಾಗಿತ್ತು. ಆದರೆ ವೈದ್ಯಕೀಯ ವರದಿ ಬರುವುದರ ಒಳಗಡೆ ಆಕೆ ಯಾರಿಗೂ ತಿಳಿಸದೇ ಆಸ್ಪತ್ರೆಯಿಂದ ತೆರಳಿದ್ದಳು.

ಉತ್ತರ ಪ್ರದೇಶದಲ್ಲಿ ಇದವರೆಗೂ 12 ಕೊರೊನಾ ವೈರಸ್ ಕೇಸ್ಗಳು ಪತ್ತೆಯಾಗಿದೆ. ಅದರಲ್ಲೂ 8 ಆಗ್ರಾದಲ್ಲೇ ಕಂಡು ಬಂದಿದೆ. ಫೆ.23ರಂದು ದಂಪತಿ ಹನಿಮೂನ್ಗೆಂದು ಗ್ರೀಸ್ಗೆ ತೆರಳಿದ್ದರು.

ಮಾರ್ಚ್ 6ರಂದು ಮುಂಬೈಗೆ ದಂಪತಿ ವಾಪಸ್ ಆಗಿದ್ದರು. ಮಾರ್ಚ್ 8ರಂದು ಬೆಂಗಳೂರಿಗೆ ಪತಿ ಒಬ್ಬನೇ ಬಂದಿದ್ದಾನೆ. ಪತ್ನಿ ಮುಂಬೈನಿಂದ ನೇರವಾಗಿ ಆಗ್ರಾಗೆ ತೆರಳಿದ್ದಾಳೆ. (ಎಂ.ಎನ್)

Leave a Reply

comments

Related Articles

error: