ಕ್ರೀಡೆ

ನ್ಯೂಜಿಲೆಂಡ್ ಬೌಲರ್ ಲೂಕಿ ಫರ್ಗೂಸನ್ ಗೆ ಕೊರೊನಾ ವೈರಸ್ ಸೋಂಕು?

ಮೆಲ್ಬೋರ್ನ್,ಮಾ.14-ಆಸ್ಟ್ರೇಲಿಯಾ ವೇಗದ ಬೌಲರ್ ಕೇನ್ ರಿಚರ್ಡ್ಸನ್ ಬೆನ್ನಲ್ಲೇ ನ್ಯೂಜಿಲೆಂಡ್ ವೇಗದ ಬೌಲರ್ ಲೂಕಿ ಫರ್ಗೂಸನ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

ಲೂಕಿ ಫರ್ಗೂಸನ್ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಪ್ರತ್ಯೇಕವಾಗಿರಿಸಿ 24 ತಾಸುಗಳ ತೀವ್ರ ನಿಗಾ ವಹಿಸಲಾಗುತ್ತಿದೆ. ಅಲ್ಲದೆ, ಇತರ ಆಟಗಾರರೊಂದಿಗೆ ಸಂಪರ್ಕ ಹೊಂದದಂತೆ ನಿರ್ಬಂಧ ವಿಧಿಸಲಾಗಿದೆ.

ಸೋಂಕು ತಗುಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ವರದಿಗಳು ಇನ್ನಷ್ಟೇ ಬರಬೇಕಿದೆ.

ಆರೋಗ್ಯ ಮಾರ್ಗದರ್ಶದ ಅನುಸಾರವಾಗಿ ಮೊದಲ ಏಕದಿನ ಪಂದ್ಯದ ಕೊನೆಯಲ್ಲಿ ಗಂಟಲು ನೋವು ವರದಿ ಮಾಡಿದ ಲೂಕಿ ಫರ್ಗೂಸನ್ ಅವರನ್ನು ಹೋಟೆಲ್ ಕೊಠಡಿಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ವೈದ್ಯಕೀಯ ತಪಾಸಣೆಯಲ್ಲಿ ರೋಗ ನಿರ್ಣಯ ಫಲಿತಾಂಶ ಬಂದ ನಂತರ ಯಾವುದೇ ತೊಂದರೆ ಕಾಣಿಸದಿದ್ದಲ್ಲಿ ತಂಡಕ್ಕೆ ಮರಳಬಹುದಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ವಕ್ತಾರ ತಿಳಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 71 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 48000 ಆಸನ ಸಾಮರ್ಥ್ಯದ ಸಿಡ್ನಿ ಕ್ರಿಕೆಟ್ ಗ್ರೌಂಡ್ ಬಿಕೋ ಎನ್ನುತ್ತಿದ್ದವು. ಸ್ವತಃ ಲೂಕಿ ಫರ್ಗೂಸನ್ ಚೆಂಡನ್ನು ತರಲು ಗ್ಯಾಲರಿ ತೆರಳಿದ ದೃಶ್ಯಗಳು ವೈರಲ್ ಆಗಿದ್ದವು.

ಗಾಯದಿಂದಾಗಿ ಈ ಹಿಂದಿನ ಭಾರತ ವಿರುದ್ಧ ಸರಣಿಗೆ ಅಲಭ್ಯರಾಗಿದ್ದ ಲೂಕಿ ಫರ್ಗೂಸನ್ ಆಸೀಸ್ ವಿರುದ್ಧ ಸರಣಿಗೆ ಕಮ್ಬ್ಯಾಕ್ ಮಾಡಿದ್ದರು. ಅಲ್ಲದೆ ತಾವಾಡಿದ ಮೊದಲ ಪಂದ್ಯದಲ್ಲಿ ಒಂಬತ್ತು ಓವರ್ಗಳನ್ನು 60 ರನ್ ತೆತ್ತು ಎರಡು ವಿಕೆಟ್ ಕಬಳಿಸಿದ್ದರು. ಹಾಗೆಯೇ ಬ್ಯಾಟಿಂಗ್ನಲ್ಲಿ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.

ಇದಕ್ಕೂ ಮೊದಲು ಕೇನ್ ರಿಚರ್ಡ್ಸನ್ ಮೊದಲ ಏಕದಿನ ಪಂದ್ಯಕ್ಕೂ ಹಿಂದಿನ ದಿನ ರಾತ್ರಿ ಗಂಟಲು ನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವರದಿ ಮಾಡಿದ್ದರು. ಬಳಿಕ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಕೇನ್ ಅವರಿಗೂ ಇತರ ಆಟಗಾರರೊಂದಿಗೆ ಬೆರೆತುಕೊಳ್ಳದಂತೆ ನಿರ್ಬಂಧ ಹೇರಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ರಿಪೋರ್ಟ್ ಬಂದ ಬಳಿಕ ತಂಡವನ್ನು ಸೇರಿಕೊಂಡಿದ್ದರು. ಇದೀಗ ಲೂಕಿ ಫರ್ಗೂಸನ್ ಸಹ ಅದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: