ಕರ್ನಾಟಕಪ್ರಮುಖ ಸುದ್ದಿ

ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಲೆಟರ್‌ಹೆಡ್‌ ಸೃಷ್ಟಿಸಿದ್ದ ಟೆಕ್ಕಿಯ ಬಂಧನ

ಬೆಂಗಳೂರು,ಮಾ.16-ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಅವರ ಹೆಸರಿನಲ್ಲಿ ನಕಲಿ ಲೆಟರ್‌ಹೆಡ್‌ ಸೃಷ್ಟಿಸಿ ವಂಚಿಸಿದ್ದ ಆರೋಪದಲ್ಲಿ ಟೆಕ್ಕಿಯೊಬ್ಬನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ಲಾವೆಂಟಿ ಸಾಯಿಕೃಷ್ಣ (24) ಬಂಧಿತ ಆರೋಪಿ. ತೆಲುಗು ನಟ ವಿಜಯ್ ದೇವರಕೊಂಡ ಅವರಿಗೆ ಇನ್ಫೋಸಿಸ್‌ ಸುಧಾಮೂರ್ತಿ ಹೆಸರಿನಲ್ಲಿ ಪತ್ರ ತಲುಪಿತ್ತು. ಅದರಲ್ಲಿ ತಾನು ಡೆವಲಪ್‌ ಮಾಡಿರುವ ಆ್ಯಪ್‌ಗೆ ಬ್ರಾಂಡ್‌ ಅಂಬಾಸಿಡರ್‌ ಆಗುವಂತೆ ಮನವಿ ಮಾಡಲಾಗಿತ್ತು. ದೇವರಕೊಂಡ ಅವರು ತಮಗೆ ಬಂದ ಪತ್ರದ ಬಗ್ಗೆ ಪರಿಶೀಲನೆ ನಡೆಸಿದಾಗ ಅದು ನಕಲಿ ಲೆಟರ್‌ಹೆಡ್‌ ಎನ್ನುವುದು ಗೊತ್ತಾಗಿತ್ತು.

ಈ ವಿಚಾರವಾಗಿ ಸಾಯಿಕೃಷ್ಣ ವಿರುದ್ಧ 2019ರಲ್ಲಿ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೇ ವಿಜಯವಾಡದಲ್ಲಿ ನೆಲೆಸಿದ್ದ ಆರೋಪಿ ಮನೆ ಖಾಲಿ ಮಾಡಿ ಹೈದರಾಬಾದ್‌ ತೆರಳಿದ್ದ. ವಿಜಯವಾಡದ ತುಂಬೆಲ್ಲಾ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಆರೋಪಿ ಶನಿವಾರ ರಾತ್ರಿ ಹೈದರಾಬಾದ್‌ನಲ್ಲಿ ಸಿಕ್ಕಿ ಬಿದ್ದಿದ್ದಾನೆ.

ಹೈದರಾಬಾದ್‌ನಲ್ಲಿ ನೆಲೆಸಿದ್ದ ಸಾಯಿಕೃಷ್ಣ, ಒಂದು ಮೊಬೈಲ್‌ ಆ್ಯಪ್‌ ಸಿದ್ಧಪಡಿಸಿದ್ದ. ಆ್ಯಪ್‌ಗೆ ಸುಲಭವಾಗಿ ಪ್ರಚಾರ ಸಿಗುವಂತೆ ಮಾಡಲು ಸುಧಾಮೂರ್ತಿ ಅವರೇ ಪತ್ರ ಬರೆದಂತೆ ನಕಲಿ ಲೆಡರ್‌ಹೆಡ್‌ ಸೃಷ್ಟಿಸಿ ಪತ್ರ ಬರೆದಿದ್ದ. (ಎಂ.ಎನ್)

Leave a Reply

comments

Related Articles

error: