
ದೇಶಪ್ರಮುಖ ಸುದ್ದಿ
ಯೋಧನಿಗೂ ಕೊರೊನಾ ವೈರಸ್ ಸೋಂಕು: ಸೈನಿಕರಲ್ಲಿ ಆತಂಕ
ನವದೆಹಲಿ,ಮಾ.18-ಭಾರತೀಯ ಸೇನೆಗೂ ಕೊರೊನಾ ವೈರಸ್ (ಕೋವಿಡ್-19) ಸೋಂಕು ಕಾಲಿಟ್ಟಿದ್ದು, ಯೋಧರೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಸಂಬಂಧ ಸೇನೆಯ ಮೂಲಗಳು ಮಾಹಿತಿ ನೀಡಿವೆ. ಭಾರತದ ಸೈನಿಕರಲ್ಲಿ ದಾಖಲಾಗುತ್ತಿರುವ ಮೊದಲ ಕೋವಿಡ್ 19 ಪ್ರಕರಣ ಇದಾಗಿದ್ದು, ಈ ಹಿನ್ನೆಲೆ ಇತರೆ ಸೈನಿಕರಲ್ಲಿ ಆತಂಕ ಹೆಚ್ಚಿಸಿದೆ.
ಸೋಂಕು ತಾಗಿರುವ ಜಮ್ಮು ಕಾಶ್ಮೀರದ ಲೇಹ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಪತ್ನಿ, ಸಹೋದರಿ ಹಾಗೂ ಇಬ್ಬರು ಮಕ್ಕಳನ್ನೂ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಡಲಾಗಿದೆ.
ಲೇಹ್ನ ಛುಛೋತ್ ಗ್ರಾಮದ ನಿವಾಸಿಯಾಗಿರುವ ಕೊರೊನಾ ಸೋಂಕಿತ ಯೋಧನಿಗೆ ತಂದೆಯಿಂದ ವೈರಸ್ ಹರಡಿದೆ ಎಂದು ತಿಳಿದುಬಂದಿದೆ. ಇರಾನ್ನಿಂದ ಫೆಬ್ರವರಿ 20ರಂದು ಏರ್ ಇಂಡಿಯಾ ವಿಮಾನದಲ್ಲಿ ಬಂದಿದ್ದ ಯೋಧನ ತಂದೆಗೆ ಕೊರೊನಾ ಸೋಂಕು ತಗುಲಿತ್ತು. ಫೆಬ್ರವರಿ 29ರಿಂದಲೂ ಅವರನ್ನು ಲಡಾಖ್ ಹಾರ್ಟ್ ಫೌಂಡೇಶನ್ನಲ್ಲಿ ಪ್ರತ್ಯೇಕವಾಗಿ ಇಡಲಾಗಿತ್ತು.
ಫೆಬ್ರವರಿ 25ರಿಂದ ರಜೆಯಲ್ಲಿದ್ದ ಯೋಧ, ಮಾರ್ಚ್ 2 ರಂದು ಕರ್ತವ್ಯಕ್ಕೆ ಮರಳಿದ್ದರು. ಬಳಿಕ ಮಾರ್ಚ್ 7ರಿಂದ 34 ವರ್ಷದ ಯೋಧನನ್ನು ಪ್ರತ್ಯೇಕವಾಗಿ ಸೋನಮ್ ನುರ್ಬೂ ಮೆಮೋರಿಯಲ್ (ಎಸ್ಎನ್ಎಂ) ಆಸ್ಪತ್ರೆಯಲ್ಲಿ ಇಡಲಾಗಿದೆ. ಮಾರ್ಚ್ 16 ರಂದು ವೀರ ಯೋಧನಿಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ ಎಂದು ಸೇನೆಯ ಮೂಲಗಳು ಮಾಹಿತಿ ನೀಡಿವೆ.
ಈ ಯೋಧ ಮಾರ್ಚ್ 2 ರಂದು ಕರ್ತವ್ಯಕ್ಕೆ ಮರಳಿದ ಬಳಿಕವೂ, ತನ್ನ ತಂದೆ ಆಸ್ಪತ್ರೆಯಲ್ಲಿ ಇದ್ದ ವೇಳೆ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದು, ಕೆಲಕಾಲ ಛುಛೋತ್ ಗ್ರಾಮದಲ್ಲೇ ತಂಗಿದ್ದರು ಎಂದೂ ಸೇನೆಯ ಮೂಲಗಳು ತಿಳಿಸಿವೆ. (ಎಂ.ಎನ್)