ಪ್ರಮುಖ ಸುದ್ದಿ

ಪ್ರವಾಹ ಮುನ್ನೆಚ್ಚರಿಕೆ : ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೂಳು ತೆಗೆಯಲು ಕ್ರಮ : 75 ಕೋಟಿ ರೂ. ಬಿಡುಗಡೆ

ರಾಜ್ಯ(ಮಡಿಕೇರಿ) ಮಾ.19 :- 2018-19 ಹಾಗೂ 2019-20ನೇ ಸಾಲಿನಲ್ಲಿ ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದ ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶಗಳಲ್ಲಿ ಗುಡ್ಡಗಳಿಂದ ಜಾರಿ ಬಿದ್ದ ಮಣ್ಣು ಮತ್ತು ಮರಗಳು ನದಿಗಳಲ್ಲಿ ಶೇಖರಣೆಯಾಗಿ ನೀರು ಸರಾಗವಾಗಿ ಹರಿಯದೇ ಹರಿವಿನ ಪಥ ಬದಲಾವಣೆ ಆಗಿರುವುದಾಗಿ ತಿಳಿದು ಬಂದಿದೆ ಎಂದು ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿಯ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಲ್ಲೂ ಜಲಾವೃತ್ತಗೊಂಡು ನಾಗರಿಕರಿಗೆ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ಹೂಳು ತೆಗೆಯಲು ಅಂದಾಜು ಪಟ್ಟಿ ಸಲ್ಲಿಸಿದ ರೂ.130 ಕೋಟಿ ಅನುದಾನದ ಪೈಕಿ ಪ್ರಸ್ತುತ ರೂ.75 ಕೋಟಿ ಹಣವನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು ಉಳಿದ ಅನುದಾನವನ್ನು 2020-21 ನೇ ಸಾಲಿನಲ್ಲಿ ನೀಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವರು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರಿಗೆ ಮಾಹಿತಿ ನೀಡಿದ್ದಾರೆ.
2019-20ನೇ ಸಾಲಿನ ಆಯವ್ಯಯದಲ್ಲಿ ರೂ 75.00 ಕೋಟಿ ವೆಚ್ಚದಲ್ಲಿ ಹಾರಂಗಿ ಜಲಾನಯನ ಪ್ರದೇಶ ಹಾಗೂ ನದಿ ಪಾತ್ರದ ಪುನ:ಶ್ಚೇತನ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಘೋಷಿಸಲಾಗಿದೆ.
ತಂತ್ರಜ್ಞರೊಂದಿಗೆ ವಿವರವಾಗಿ ಚರ್ಚಿಸಿ ತೀವ್ರತರವಾಗಿ ಹಾನಿಗೊಳಗಾದ ಹಲವಾರು ಪ್ರದೇಶಗಳನ್ನು ಪರಿಶೀಲಿಸಿ, ವಿನ್ಯಾಸಗಳಿಗೆ ಅನುಗುಣವಾಗಿ 8 ಕಿ.ಮೀ. ಉದ್ದಕ್ಕೆ ಆಯ್ದ ಭಾಗಗಳಲ್ಲಿ ನದಿಯ ದಡದ ಸಂರಕ್ಷಣೆ,  ಹಾರಂಗಿ ಜಲಾಶಯದಿಂದ 8,80,000 ಘನ ಮೀ ಹೂಳನ್ನು ತೆಗೆಯುವುದು ಎಂಬುವುದಾಗಿ ಅಂದಾಜು ಪಟ್ಟಿ ತಯಾರಿಸಲಾಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿಗಮದ ಕಾರ್ಯಕ್ರಮದ ಕಾರ್ಯಭಾರ ಅಧಿಕವಾಗಿರುವುದರಿಂದ ಕಾಮಗಾರಿಗಳನ್ನು 2020-21 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅನುದಾನದ ಲಭ್ಯತೆಗೆ ಅನುಸಾರವಾಗಿ ಕೈಗೊಳ್ಳಲು ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: