ಮೈಸೂರು

ಕಾ.ರಾಮೇಶ್ವರಪ್ಪ ವಿರುದ್ಧ ಮಾಡಿದ ಆರೋಪದಲ್ಲಿ ಸತ್ಯಾಂಶವಿಲ್ಲ : ನೌಕರರ ವಿರುದ್ಧ ಕ್ರಮ ಜರುಗಿಸಲು ಒತ್ತಾಯ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಅವರ ವಿರುದ್ಧ ಆಹಾರ ಇಲಾಖೆಯ ನೌಕರರು ಸುಳ್ಳು ಆರೋಪ ಮಾಡಿದ್ದಾರೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ ಹೇಳಿದರು.

ಬುಧವಾರ ಸುದ್ದಿಗೋಷ‍್ಠಿಯಲ್ಲಿ ಮಾತನಾಡಿದ ಅವರು, ಡಾ.ಕಾ.ರಾಮೇಶ್ವರಪ್ಪನವರು ಮೈಸೂರು ಜಿಲ್ಲೆಯ ಅಧಿಕಾರಿಯಾದ ಮೇಲೆ ದಲಿತರು ಹಾಗೂ ಹಿಂದುಳಿದವರ ಸೇವೆಯಲ್ಲಿ ತೊಡಗಿದ್ದಾರೆ. 250 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ 90 ಕ್ಕೂ ಹೆಚ್ಚು ಜನರನ್ನು ಬಂಧಿಸಲು ಕಾರಣರಾಗಿದ್ದಾರೆ. 148 ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸಿದ್ದಾರೆ. ಕಾಳಸಂತೆಕೋರರು, ಅಕ್ರಮ ವಹಿವಾಟುದಾರರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ. ಇಂತಹ ದಕ್ಷ ಅಧಿಕಾರಿಯ ವಿರುದ್ಧ ಮೇಲ್ಜಾತಿಯ ನೌಕರರು ಸಂಚು ನಡೆಸಿದ್ದಾರೆ ಎಂದು ಆರೋಪಿಸಿದರು.

ಆಹಾರ ಇಲಾಖೆಯ ನೌಕರರ ನಡವಳಿಕೆಯಿಂದ ಡಾ.ಕಾ.ರಾಮೇಶ್ವರಪ್ಪ ಅವರ ತೇಜೋವಧೆ ಆಗಿರುವುದರಿಂದ ಈ ಕೂಡಲೇ ಸಮಗ್ರ ತನಿಖೆ ನಡೆಸಿ, ಇಲಾಖೆಯ ನೌಕರರ ವಿರುದ್ಧ ತೀವ್ರ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದರು.

ಸುದ್ದಿಗೋಷ‍್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ರಾಜಣ್ಣ ಇಟ್ನಾ, ಚಂದ್ರಶೇಖರ್ ಹಲಗೂಡು, ಹನುಮಂತು ಬೆಲವತ್ತ ಹಾಜರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: