ದೇಶಪ್ರಮುಖ ಸುದ್ದಿ

ರಾಜ್ಯಸಭಾ ಸದಸ್ಯರಾಗಿ ರಂಜನ್ ಗೊಗೊಯ್ ಪ್ರಮಾಣವಚನ ಸ್ವೀಕಾರ

ನವದೆಹಲಿ,ಮಾ.19-ಸುಪ್ರೀಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ರಾಜ್ಯಸಭಾ ನಾಮ ನಿರ್ದೇಶಿತ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು.

ಮೂಲಕ ದೇಶದ ಇತಿಹಾಸದಲ್ಲೇ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರು ರಾಜ್ಯಸಭೆ ಪ್ರವೇಶಿಸಿದಂತಾಗಿದೆ

ರಾಜ್ಯಸಭೆ ಸಭಾಪತಿ ಹಾಗೂ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಂಜನ್ ಗೊಗೊಯ್ ಗೆ ಪ್ರಮಾಣವಚನ ಬೋಧಿಸಿದರು.

ಗೊಗೊಯ್ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದಕ್ಕೆ ಪ್ರತಿಪಕ್ಷಗಳು ಹಾಗೂ ನ್ಯಾಯಾಂಗ ಕ್ಷೇತ್ರದಲ್ಲೂ ವಿರೋಧದ ಮಾತುಗಳು ಕೇಳಿ ಬಂದಿವೆ. ಗೊಗೊಯ್ ನಡೆಗೆ ಹಲವು ನಿವೃತ್ತ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೊಗೊಯ್ ಪ್ರಮಾಣವಚನ ಸ್ವೀಕರಿಸುವ ವೇಳೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರುಶೇಮ್ ಶೇಮ್ಎಂದು ಕೂಗಿ ವಿರೋಧ ವ್ಯಕ್ತಪಡಿಸಿದರು. ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ರಾಜ್ಯಸಭೆಗೆ ಕರೆಸಿಕೊಂಡ ಸರ್ಕಾರ, ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಹವಣಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರಂಜನ್ ಗೊಗೊಯ್ ಅವರ ರಾಜ್ಯಸಭೆ ಪ್ರವೇಶ ಕರ್ತವ್ಯ ನಿರತ ನ್ಯಾಯಮೂರ್ತಿಗಳ ಮೇಲೆ ಪ್ರಭಾವ ಬೀರುತ್ತದೆ. ಸರ್ಕಾರದ ಪರವಾಗಿ ತೀರ್ಪುಗಳನ್ನು ನೀಡಿದರೆ ಉನ್ನತ ಮಟ್ಟದ ಹುದ್ದೆ ಪಡೆಯಬಹುದು ಎಂಬ ಆಸೆ ಅವರಲ್ಲಿಯೂ ಮೊಳಕೆಯೊಡೆಯುವ ಸಾಧ್ಯತೆ ಇರುತ್ತದೆ ಎಂದು ಪ್ರತಿಪಕ್ಷಗಳು ಆತಂಕ ವ್ಯಕ್ತಪಡಿಸಿವೆ.

ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್, ಗೊಗೊಯ್ ರಾಜ್ಯಸಭೆ ಪ್ರವೇಶಿಸುವುದರಿಂದ ಜನ ನ್ಯಾಯಾಂಗದ ಮೇಲೆ ಭರವಸೆ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು ಎಂದು ಹೇಳಿದ್ದಾರೆ.

ಇವೆಲ್ಲದಕ್ಕೂ ತಿರುಗೇಟು ನೀಡಿರುವ ಗೊಗೊಯ್, ದೇಶದ ಒಳಿತಿಗಾಗಿ ನ್ಯಾಯಾಂಗ ಹಾಗೂ ಶಾಸಕಾಂಗ ಕೆಲವೊಮ್ಮೆ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಅದರಂತೆ ರಾಜ್ಯಸಭೆಯಲ್ಲಿ ತಮ್ಮ ಇರುವಿಕೆ ಶಾಸಕಾಂಗಕ್ಕೆ ನ್ಯಾಯಾಂಗದ ಮಹತ್ವ ತಿಳಿಸುವುದಷ್ಟೇ ಅಲ್ಲದೆ ನ್ಯಾಯಾಂಗದ ಬೇಕು ಬೇಡಗಳ ಕುರಿತು ಸಮರ್ಥವಾಗಿ ಧ್ವನಿ ಎತ್ತಲು ಅವಕಾಶ ಸಿಕ್ಕಂತಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: