ಕ್ರೀಡೆದೇಶಪ್ರಮುಖ ಸುದ್ದಿ

ದಿಗ್ಗಜ ಫುಟ್ಬಾಲ್ ಆಟಗಾರ ಪಿ.ಕೆ. ಬ್ಯಾನರ್ಜಿ ನಿಧನ

ಕೋಲ್ಕೊತ್ತಾ,ಮಾ.20-ದಿಗ್ಗಜ ಫುಟ್ಬಾಲ್ ಆಟಗಾರ ಪಿ.ಕೆ. ಬ್ಯಾನರ್ಜಿ (83) ಇಂದು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ದೀರ್ಘಕಾಲದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಲ್ಲಿನ ಮೆಡಿಕಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮಾ.2 ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಫುಟ್ಬಾಲ್ ಕ್ಷೇತ್ರದಲ್ಲಿ ಆಟಗಾರ ಮತ್ತು ತರಬೇತುದಾರರಾಗಿ ಗುರುತಿಸಿಕೊಂಡಿದ್ದ ಬ್ಯಾನರ್ಜಿ ದೇಶದ ಕ್ರೀಡೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದವರಲ್ಲಿ ಒಬ್ಬರು.

ಪಶ್ಚಿಮ ಬಂಗಾಳದ ಉತ್ತರ ಭಾಗದ ಪ್ರಮುಖ ಪಟ್ಟಣಗಳಲ್ಲಿ ಒಂದಾದ ಜಲ್ಪೈಗುರಿಯಲ್ಲಿ ಜನಿಸಿದ ಬ್ಯಾನರ್ಜಿ ಜಮ್ಷೇಡ್ಪುರದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಸಂತೋಷ್ ಟ್ರೋಫಿಯಲ್ಲಿ ಬಿಹಾರ ಜರ್ಸಿ ಧರಿಸುವ ಮೂಲಕ ಫುಟ್ಬಾಲ್ ಕ್ರೀಡಾಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.

ಎರಡು ಬಾರಿಯ ಒಲಿಂಪಿಯನ್ ಬ್ಯಾನರ್ಜಿ ಅವರು 1960 ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಫ್ರಾನ್ಸ್ ವಿರುದ್ಧ ಅಸಾಧಾರಣ ಪ್ರದರ್ಶನ ತೋರಿದ್ದರು. 1962ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಪರ ಏಕೈಕ ಗೋಲ್ ಗಳಿಸಿದ್ದರು.

ಪೂರ್ವ ಬಂಗಾಳ, ಮೋಹನ್ ಬಗಾನ್ ಮತ್ತು ರಾಷ್ಟ್ರೀಯ ತಂಡದ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದ ಬ್ಯಾನರ್ಜಿ ಆ ತಂಡದ ಸದಸ್ಯರು ಸ್ವರ್ಣ ವಿಜೇತರಾಗುವಂತೆ ಮಾಡಿದ್ದರು. ಬ್ಯಾನರ್ಜಿ ಅವರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. (ಎಂ.ಎನ್)

 

Leave a Reply

comments

Related Articles

error: