ಪ್ರಮುಖ ಸುದ್ದಿ

 ಸಂಪರ್ಕ ತಡೆಯಲ್ಲಿರುವವರ ಬಗ್ಗೆ ವಿಶೇಷ ಗಮನಹರಿಸಿ : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

ರಾಜ್ಯ(ಮಡಿಕೇರಿ) ಮಾ.21 :- ವಿದೇಶದಿಂದ ಆಗಮಿಸಿ ಮನೆಗಳಲ್ಲಿಯೇ ಸಂಪರ್ಕ ತಡೆಯಲ್ಲಿರುವವರ (ಹೋಂ ಕ್ವೆರೆಂಟೈನ್) ಬಗ್ಗೆ ವಿಶೇಷ ಗಮನ ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ   ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹಲವರು ಮನೆಗಳಲ್ಲಿಯೇ ಸಂಪರ್ಕ ತಡೆಯಲ್ಲಿದ್ದು, ಇವರ ಚಲನವಲನಗಳ ಬಗ್ಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ವಿಶೇಷ ಗಮನಹರಿಸಬೇಕು ಎಂದರು.

ತಹಶೀಲ್ದಾರರು, ತಾ.ಪಂ.ಇಒಗಳು ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳು ಪ್ರತಿ ನಿತ್ಯ ಮನೆಯಲ್ಲಿಯೇ ಸಂಪರ್ಕ ತಡೆಯಲ್ಲಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದರು.

ಈಗಾಗಲೇ ಜಿಲ್ಲೆಯ ಒಬ್ಬ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದ್ದರಿಂದ ಕೇತುಮೊಟ್ಟೆ ಗ್ರಾಮದ 500 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಕಂಟೈನ್‍ಮೆಂಟ್   ಎಂದು ಘೋಷಿಸಲಾಗಿದ್ದು, ಈ ಪ್ರದೇಶಕ್ಕೆ ಆಹಾರ ಪೂರೈಸಲು ಅಗತ್ಯ ಕ್ರಮವಹಿಸುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ್ದಾರೆ.

ಸದ್ಯ ಕಂಟೈನ್‍ಮೆಂಟ್ ವಲಯದಲ್ಲಿ 75 ಮನೆಗಳಿದ್ದು 304 ಮಂದಿ ವಾಸಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಹಾರ ಇಲಾಖೆಯು ಕೇತುಮೊಟ್ಟೆ ಗ್ರಾಮದಲ್ಲಿನ ಕುಟುಂಬಗಳಿಗೆ 14 ದಿನಗಳ ವರೆಗೆ ಅವಶ್ಯವಾದ ಆಹಾರ ಸಾಮಾಗ್ರಿ ಮತ್ತು ಇನ್ನಿತರೆ ವಸ್ತುಗಳನ್ನು ನೀಡಲು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ತಹಶೀಲ್ದಾರರು ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಯಾರೆಲ್ಲ ವಿದೇಶ ಪ್ರವಾಸಗಳಿಂದ ಮರಳಿ ಬಂದಿದ್ದಾರೆ, ಎಂಬ ಬಗ್ಗೆ ಖಚಿತ ವರದಿ ನೀಡಬೇಕು. ಆಹಾರ ವಿತರಣೆಯ ಸಂದರ್ಭದಲ್ಲಿಯೂ ಸಹ ಎಚ್ಚರವಹಿಸಿ ಆಹಾರ ಪೂರೈಕಾ ಪೊಟ್ಟಣಗಳಲ್ಲಿ ನಿರ್ದಿಷ್ಟ ಪ್ರಮಾಣದ ಅಕ್ಕಿ, ಬೇಳೆ, ಉಪ್ಪು, ಎಣ್ಣೆ ಮತ್ತಿತರ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಅವರು ಹೇಳಿದರು.

ನಿರ್ಭಂದಿತ ಪ್ರದೇಶದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿದ್ದರೆ ಅವರನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಜೊತೆಗೆ ಬಫರ್ ಜೋನ್‍ನಲ್ಲಿರುವ 247 ಮನೆಗಳ 1054 ಜನರ ಬಗ್ಗೆಯೂ ಸಹ ಪ್ರತಿ ನಿತ್ಯ ನಿಗಾವಹಿಸಿ ಸೋಂಕು  ಲಕ್ಷಣಗಳು ಕಂಡುಬಂದ ಕೂಡಲೇ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಅಪರ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಕಾರ್ಯಪ್ಪ, ಅಧೀಕ್ಷಕರಾದ ಡಾ.ಲೋಕೇಶ್, ಡಿವೈಎಸ್‍ಪಿ ದಿನೇಶ್ ಕುಮಾರ್, ಜಯಕುಮಾರ್ ಇತರರು ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: