
ಪ್ರಮುಖ ಸುದ್ದಿ
ಮಡಿಕೇರಿ ಕೋರ್ಟ್ನಲ್ಲಿ ಕೊರೋನಾ ವೈರಸ್ ಜಾಗೃತಿ ಕಾರ್ಯಕ್ರಮ
ರಾಜ್ಯ(ಮಡಿಕೇರಿ) ಮಾ.21 :- ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನ್ಯಾಯಲಯದ ಆವರಣದಲ್ಲಿ ನ್ಯಾಯಾಧೀಶರಿಗೆ, ಸಿಬ್ಬಂದಿ ವರ್ಗದವರಿಗೆ, ವಕೀಲರಿಗೆ, ಕಕ್ಷೀದಾರರಿಗಾಗಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯ ತಪಾಸಣೆ ನಡೆಯಿತು. ಕೊರೊನಾ ವೈರಸ್ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಲಾಯಿತು.
ಕೋವಿಡ್-19 ಭಯಬೇಡ ಎಚ್ಚರವಿರಲಿ ಎಂಬ ಮಾಹಿತಿಯೊಂದಿಗೆ ಕರಪತ್ರಗಳನ್ನು ಹಂಚಲಾಯಿತು. ತಿಳಿದುಕೊಳ್ಳಬೇಕಾದ ಮಾಹಿತಿಗಳು, ಅನುಸರಿಸಬೇಕಾದ ಮುಂಜಾಗ್ರತ ಕ್ರಮದ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಎಲ್ಲಾ ಸಿಬ್ಬಂದಿಗಳಿಗೆ ಮುಖಕವಚ, ಕೀಟಾಣು ನಿರೋದಕ ದ್ರಾವಣವನ್ನು ವಿತರಿಸಿದರು. ವೈದ್ಯರಾದ ಡಾ.ರೀನಾ ಸುಬ್ಬಯ್ಯ ಅವರು ಆರೋಗ್ಯ ಪರೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ವಿ.ವಿ.ಮಲ್ಲಾಪುರ, 1 ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಪಿ.ಎಸ್.ಚಂದ್ರಶೇಖರ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸ, ಅಪರ ಸಿವಿಲ್ ನ್ಯಾಯಾಧೀಶರಾದ ಸ್ಮಿತಾ.ಸಿ.ಎ.ಒ ಎಸ್.ಟಿ ಶಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಇತರರು ಇದ್ದರು. ರಮೇಶ್ ಅವರು ಸ್ವಾಗತಿಸಿ, ನಿರೂಪಿಸಿದರು, ಬಿ.ಎಸ್ ಜಯಪ್ಪ ವಂದಿಸಿದರು. (ಕೆಸಿಐ,ಎಸ್.ಎಚ್)