ಪ್ರಮುಖ ಸುದ್ದಿ

ವೈದ್ಯರ ನಿರ್ಲಕ್ಷ್ಯದಿಂದ ಶಿಶು ಸಾವು : ವಿರಾಜಪೇಟೆ ಆಸ್ಪತ್ರೆ ವಿರುದ್ಧ ಆರೋಪ

ರಾಜ್ಯ( ಮಡಿಕೇರಿ) ಮಾ.23 :- ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ಮಗು ಮೃತಪಟ್ಟಿದೆ ಎಂದು ಆರೋಪಿಸಿರುವ ಅಮ್ಮತ್ತಿ ಗ್ರಾಮದ ನಿವಾಸಿ ಎಂ.ಎಂ.ಫಯಾಜುಲ್ಲಾ ಖಾನ್ ಈ ಸಂಬಂಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ತ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪತ್ನಿ ಸಮೀನಾ(30) ಅವರು ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಮಾ.18ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಬಳಿಕ ಅಲ್ಲಿನ ಪ್ರಸೂತಿ ತಜ್ಞರು ಹಾಗೂ ಮಕ್ಕಳ ತಜ್ಞರು ಅಂಗಾಂಗ ವೈಫಲ್ಯದಿಂದ ಹೊಟ್ಟೆಯೊಳಗೆ ಮಗು ಸತ್ತು ಹೊರಗಡೆ ಬಂದಿರುವುದಾಗಿ ತಿಳಿಸಿದ್ದಾರೆ. ಆದರೆ ತಮ್ಮ ಪತ್ನಿಗೆ ವೈದ್ಯರ ಸಲಹೆಯಂತೆ 3, 5 ಹಾಗೂ 9ನೇ ತಿಂಗಳಿನಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದು, ಈ ಎಲ್ಲಾ ಸಂದರ್ಭದಲ್ಲೂ ಮಗುವಿನ ಉಸಿರಾಟ ಹಾಗೂ ಚಲನೆ ಸಮರ್ಪಕವಾಗಿರುವುದನ್ನು ಮಾ.12ರಂದು ನಡೆಸಿದ ಸ್ಕ್ಯಾನಿಂಗ್ ವರದಿ ದೃಢಪಡಿಸಿದೆ ಎಂದು ಹೇಳಿದರು.
ಮಾ.18ರಂದು ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಪತ್ನಿ ಹೆರಿಗೆಗೆ ದಾಖಲಾಗಿದ್ದು, ಇದಕ್ಕೂ ಮೊದಲು ಪ್ರಸೂತಿ ತಜ್ಞರು ಇಲ್ಲಿ ಹೆರಿಗೆ ಆಗದಿದ್ದರೆ ಮಡಿಕೇರಿಗೆ ಕರದದೊಯ್ಯಬೇಕಾಗಬಹುದು ಎಂದು ತಿಳಿಸಿದ್ದರು. ಆದರೆ ಹೆರಿಗೆಗೆ ದಾಖಲಾದ ಸಂದರ್ಭ ಪ್ರಸೂತಿ ತಜ್ಞರು ಬಾರದೆ ದಾದಿಯರೇ ಹೆರಿಗೆ ಮಾಡಿಸಿದ್ದಾರೆ. ಆ ಬಳಿಕ ಗಡಿಬಿಡಿಯಲ್ಲಿ ಅಲ್ಲಿಗೆ ಆಗಮಿಸಿದ ವೈದ್ಯರು ಮಕ್ಕಳ ತಜ್ಞರನ್ನು ಕರೆಸಿದ್ದಾರೆ. ಅವರು ಬಂದು ಮಗು ಅಂಗಾಂಗ ವೈಫಲ್ಯದಿಂದ ಹೊಟ್ಟೆಯೊಳಗೆ ಸತ್ತು ಹೋಗಿದ್ದು, ಅದು ಜೀವಂತವಾಗಿರುತ್ತಿದ್ದಲ್ಲಿ ಜೀವನ ಪೂರ್ತಿ ನರಳುವ ಪರಿಸ್ಥಿತಿ ಇತ್ತು ಎಂದು ತಿಳಿಸಿದ್ದಾರೆ. ಎಲ್ಲಾ ಸ್ಕ್ಯಾನಿಂಗ್ ರಿಪೋರ್ಟ್‍ಗಳು ನಾರ್ಮಲ್ ಎಂದು ತಿಳಿಸಿರುವಾಗ ಈ ರೀತಿಯಾಗಿ ಮಗು ಮೃತಪಡಲು ಹೇಗೆ ಸಾಧ್ಯ ಎಂದು ಫಯಾಜುಲ್ಲಾ ಖಾನ್ ಪ್ರಶ್ನಿಸಿದರು.
9ನೇ ತಿಂಗಳ ಸ್ಕ್ಯಾನಿಂಗ್ ವರದಿಯನ್ನು ನೀಡಲು ದಾದಿಯರು ನಿರಾಕರಿಸಿದ್ದು, ನಾವು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ ನಂತರವಷ್ಟೇ ಅದನ್ನು ನೀಡಿದ್ದಾರೆ. ಮಗುವಿನ ಮರಣಾ ನಂತರದ ವರದಿಯನ್ನು ಕೇಳಿದರೆ ಶಸ್ತ್ರಚಿಕಿತ್ಸಕರು ನೀಡುತ್ತಿಲ್ಲ. ಅಲ್ಲದೆ ವೈದ್ಯರ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸಲು ಅವರು ವಿಳಂಬ ಮಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ವೈದ್ಯರ ನಿರ್ಲಕ್ಷ್ಯದಿಂದ ನಮಗೆ ಅನ್ಯಾಯವಾಗಿರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು. ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನು ಕೋರಲಾಗಿದೆ ಎಂದು ತಿಳಿಸಿದರು.
ವೀರಾಜಪೇಟೆ ಆಸ್ಪತ್ರೆಯಲ್ಲಿ ಬಡವರ ಶೋಷಣೆ ನಿರಂತರವಾಗಿ ನಡೆಯುತ್ತಿದ್ದು, ಔಷಧಿ ಇದ್ದರೂ ಖಾಸಗಿ ಔಷಧಿ ಅಂಗಡಿಗಳಿಗೆ ಚೀಟಿ ನೀಡುವುದು, ಸ್ಕ್ಯಾನಿಂಗ್ ಸೌಲಭ್ಯವಿದ್ದರೂ, ಖಾಸಗಿ ಸಂಸ್ಥೆಗೆ ಕಳುಹಿಸುವುದೂ ಸೇರಿದಂತೆ ಹಲವು ರೀತಿಯಲ್ಲಿ ಬಡವರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಎಂ.ಎಂ.ಫಯಾಜುಲ್ಲಾ ಖಾನ್ ಆರೋಪಿಸಿದರು.
ತಮಗೆ ಆಗಿರುವ ಈ ಅನ್ಯಾಯ ಇನ್ನು ಮುಂದೆ ಯಾರಿಗೂ ಆಗಬಾರದು ಎನ್ನುವ ಕಾರಣಕ್ಕಾಗಿ ಮತ್ತು ಗಂಡು ಮಗುವನ್ನು ಕಳೆದುಕೊಂಡ ನೋವಿನಿಂದ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದೂರು ಸಲ್ಲಿಸಲು ನಿರ್ಧರಿಸಿರುವುದಾಗಿ ಅವರು ಹೇಳಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: