ಪ್ರಮುಖ ಸುದ್ದಿ

ಕೊಡಗು ಲಾಕ್ ಡೌನ್ : ಲಾಠಿ ರುಚಿ ತೋರಿಸಿದ ಪೊಲೀಸರು : ಅಗತ್ಯ ವಸ್ತುಗಳಿಗೆ ಮುಗಿಬಿದ್ದ ಜನ : ಸಹಕರಿಸಲು ಜಿಲ್ಲಾಡಳಿತ ಮನವಿ

ರಾಜ್ಯ( ಮಡಿಕೇರಿ) ಮಾ.24 :- ಕೊರೋನಾ ವೈರಸ್‍ನ ಒಂದು ಪ್ರಕರಣ ಪತ್ತೆಯಾದ ಕೊಡಗು ಜಿಲ್ಲೆಯಲ್ಲಿ “ಲಾಕ್ ಡೌನ್” ಆದೇಶ ಮಾ.31 ರವರೆಗೆ ಚಾಲ್ತಿಯಲ್ಲಿದೆ. ನಿರ್ಬಂಧಗಳನ್ನು ಕಠಿಣಗೊಳಿಸಿದ್ದರೂ ಕೆಲವು ಮಂದಿ ರಸ್ತೆಗಿಳಿದು ನಿಯಮ ಉಲ್ಲಂಘಿಸಿದಕ್ಕಾಗಿ ಪೊಲೀಸರು ಲಾಠಿ ರುಚಿ ತೋರಿಸಿದ ಪ್ರಸಂಗ ನಡೆಯಿತು.
ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಮುಂಜಾನೆ ಕೆಲವರು ರಸ್ತೆಯಲ್ಲಿ ವಿನಾಕಾರಣ ಕಾಣಿಸಿಕೊಂಡಾಗ ಡಿವೈಎಸ್‍ಪಿ ದಿನೇಶ್ ಕುಮಾರ್ ನೇತೃತ್ವದ ಪೊಲೀಸರ ತಂಡ ಲಾಠಿ ಬೀಸಿತು. ವಾಹನಗಳಲ್ಲಿ ಬಂದವರಿಗೆ ಬುದ್ದಿ ಹೇಳಿ ಮನೆಗೆ ಕಳುಹಿಸಿತು. ಅನಿವಾರ್ಯ ಕಾರಣಕ್ಕಾಗಿ ನಗರ ಪ್ರವೇಶಿಸಿದವರಿಗೆ ಕೊನೆಯ ಎಚ್ಚರಿಕೆ ನೀಡಿ ಕಳುಹಿಸಿದರು.
ಯಾರೂ ರಸ್ತೆಗಿಳಿಯದಂತೆ ಪೊಲೀಸ್ ವಾಹನದ ಧ್ವನಿವರ್ಧಕದ ಮೂಲಕ ಪೊಲೀಸರು ಬೀದಿ ಬೀದಿಗಳಲ್ಲಿ ಜನರಿಗೆ ಮನವಿ ಮಾಡುತ್ತಿದ್ದ ದೃಶ್ಯ ಕಂಡು ಬಂತು.
ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಎಂದಿನಂತೆ ಪತ್ರಿಕಾ ವಿತರಣೆಗೆ ಪತ್ರಿಕೆಗಳನ್ನು ಅಣಿಗೊಳಿಸುತ್ತಿದ್ದ ಪತ್ರಿಕಾ ವಿತರಕರ ಮೇಲೆ ಪೊಲೀಸರು ಲಾಠಿ ಬೀಸುವ ಮೂಲಕ ಪತ್ರಕರ್ತರ ವಿರೋಧವನ್ನು ಕಟ್ಟಿಕೊಂಡರು.
ಇದೇ ರೀತಿಯಾಗಿ ಜಿಲ್ಲೆಯ ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಅವರ ಬಳಿ ಡಿವೈಎಸ್‍ಪಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂತು. ಪೊಲೀಸ್ ಅಧಿಕಾರಿಗಳ ವರ್ತನೆ ವಿರುದ್ಧ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಪ್ರಮುಖರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಬಳಿ ದೂರಿಕೊಂಡರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಬೆಳಗ್ಗೆ 5 ರಿಂದ 7 ಗಂಟೆಯವರೆಗೆ ದಿನಪತ್ರಿಕೆ ಸೆಗ್ರಿಗೇಷನ್ (ವಿಭಜನೆ) ಮಾಡಲು ವಿತರಣೆದಾರರಿಗೆ ಹಾಗೂ ದಿನಪತ್ರಿಕೆಗಳನ್ನು ಮನೆ ಮನೆಗೆ ವಿತರಣೆ ಮಾಡುವ ವಿತರಕರಿಗೆ ಪತ್ರಿಕೆ ವಿತರಿಸಲು ಬೆಳಗ್ಗೆ 8.30 ಗಂಟೆ ವರೆಗೆ ಮಾತ್ರ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು.
ಮುಗಿಬಿದ್ದ ಜನ
ದಿನಸಿ ಹಾಗೂ ತರಕಾರಿ ಕೊಂಡುಕೊಳ್ಳಲು ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಅವಕಾಶ ನೀಡಿದ್ದರಿಂದ ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದುಕೊಂಡವು. ಈ ಸಂದರ್ಭ ಅಗತ್ಯ ವಸ್ತುಗಳನ್ನು ಕೊಳ್ಳಲು ಜನ ಮುಗಿ ಬಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ಅಂತರ ಕಾಯ್ದುಕೊಂಡು ಸಾಲುಗಟ್ಟಿ ನಿಲ್ಲುವಂತೆ ಸೂಚಿಸಿದರು. ನಂತರ ಅಂಗಡಿಗಳ ಮುಂದೆ ದೊಡ್ಡ ದೊಡ್ಡ ಸಾಲುಗಳು ಕಂಡು ಬಂದವು. ಬುಧವಾರ ಯುಗಾದಿ ಹಬ್ಬವಾದ ಕಾರಣ ಹಬ್ಬಕ್ಕಾಗಿ ವಸ್ತುಗಳನ್ನು ಕೊಂಡುಕೊಳ್ಳಲು ಜನರು ಹೆಚ್ಚು ಆಸಕ್ತಿ ತೋರುತ್ತಿದ್ದ ದೃಶ್ಯ ಕಂಡು ಬಂತು. ಇದೇ ಪರಿಸ್ಥಿತಿ ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಪಟ್ಟಣಗಳಲ್ಲೂ ಕಂಡು ಬಂತು.
ಜಿಲ್ಲೆಯ ಗಡಿಭಾಗಗಳಲ್ಲಿ 13 ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದು, ಪೊಲೀಸರ ಕಣ್ತಪ್ಪಿಸಿ ಗಡಿ ಪ್ರವೇಶಿಸಲು ಯತ್ನಿಸಿದ ವಾಹನ ಚಾಲಕರ ವಿರುದ್ಧ ಪೊಲೀಸರು ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದರು. ಯಾವುದೇ ವಾಹನಗಳು ಆಗಮಿಸದಂತೆ ಮತ್ತು ನಿರ್ಗಮಿಸದಂತೆ ನಿಗಾ ವಹಿಸಿದರು.
ಬೆಂಗಳೂರಿನ ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರು, ವಿದ್ಯಾಭ್ಯಾಸಕ್ಕಾಗಿ ಪಿ.ಜಿ ಯಲ್ಲಿದ್ದ ಕೆಲವು ವಿದ್ಯಾರ್ಥಿಗಳು ತಮ್ಮ ತಮ್ಮ ಊರಿಗೆ ಹಿಂತಿರುಗಲು ಖಾಸಗಿ ಬಸ್‍ಗಳಲ್ಲಿ ಪ್ರಯಾಣಿಸುತ್ತಿದ್ದರು. ಜಿಲ್ಲೆಯ ಗಡಿ ಭಾಗದ ಶಿರಂಗಾಲ ಗೇಟ್‍ನಲ್ಲಿ ಮೂರು ಬಸ್‍ಗಳನ್ನು ಪೊಲೀಸರು ತಡೆದ ಪರಿಣಾಮ ಬಸ್‍ನಲ್ಲಿದ್ದವರು ತಮ್ಮ ತಮ್ಮ ಊರಿಗೆ ತೆರಳಲು ಪರದಾಡಿದ ಪ್ರಸಂಗ ನಡೆಯಿತು.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್ ಅವರು ಮೇಲಧಿಕಾರಿಗಳ ಗಮನಕ್ಕೆ ತಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ ಮಡಿಕೇರಿ ಮೂಲಕ ಸುಳ್ಯದವರೆಗೆ ಎರಡು ಬಸ್‍ಗಳ ವ್ಯವಸ್ಥೆ ಮಾಡಿ ಕಳುಹಿಸಿಕೊಡುವ ಮೂಲಕ ಪ್ರಯಾಣಿಕರ ಪರ ಕಾಳಜಿ ತೋರಿದರು.
ಲಾಕ್ ಡೌನ್ ಹಾಗೂ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕುಶಾಲನಗರ ಹೋಬಳಿ ವ್ಯಾಪ್ತಿಯ ಎಂಟು ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮಗಳು ಸಂಪೂರ್ಣ ಬಂದ್ ಆಗಿದ್ದವು.
ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ತೂರೆನೂರು, ಶಿರಂಗಾಲ ಸೇರಿದಂತೆ ಬಾಣವಾರ ಗೇಟ್ ಸಂಪೂರ್ಣವಾಗಿ ಬಂದ್ ಆಗಿದೆ. ಕೆಲವು ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸೂಕ್ತ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಹಕರಿಸಲು ಮನವಿ
ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಸೋಂಕು ಹರಡದಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಜನರಿಂದ ಜನರಿಗಾಗಿ ಇರುವ ಈ ನಿಯಮಗಳನ್ನು ಜನರು ಪಾಲಿಸುವ ಮೂಲಕ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಮನವಿ ಮಾಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: