ದೇಶಪ್ರಮುಖ ಸುದ್ದಿ

ಕರೊನಾ ಹಬ್ಬಿಸುವ ಜನರ ವಿರುದ್ಧ ಕಠಿಣ ಕ್ರಮ: ಪೊಲೀಸರಿಗೆ ಪ್ರಧಾನಿ ಸೂಚನೆ

ನವದೆಹಲಿ (ಮಾ.25): ಕರೊನಾ ಸೋಂಕು ಹರಡದಂತೆ ತಡೆಯುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ ನಂತರದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ, ಸಾರ್ವಜನಿಕರ ಜತೆಗೆ ವಿಡಿಯೋ ಸಂವಾದ ನಡೆಸಿದರು. ಈ ವಿಡಿಯೋ ಸಂವಾದವನ್ನು ಅವರು ತಮ್ಮ ಸ್ವಕ್ಷೇತ್ರವಾದ ವಾರಾಣಸಿಯ ಜನತೆಯ ಜತೆಗೆ ನಡೆಸಿದರು.

ನಮ್ಮ ದೇಶದ ಸಾಮಾನ್ಯ ಪ್ರಜೆಯೂ ಸರಿಯಾದ ಸಮಯದಲ್ಲಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂಬುದರಲ್ಲಿ ನಂಬಿಕೆ ಇಟ್ಟವರು. ಮಾರ್ಚ್ 22ರಂದು ಜನತಾ ಕರ್ಫ್ಯೂಗೆ ಜನರು ಸ್ಪಂದಿಸಿದ ರೀತಿಯಲ್ಲಿ ಇದು ಸ್ಪಷ್ಟವಾಗಿದೆ. ಇದೊಂದು ಸಂಕಷ್ಟದ ಸನ್ನಿವೇಶ. ಇದನ್ನು ಎದುರಿಸಿ ಗೆಲ್ಲುವುದು ನಮ್ಮೆಲ್ಲರಿಗೂ ಈಗ ಅನಿವಾರ್ಯ ಎಂದು ಪ್ರಧಾನಿ ಸಂವಾದದಲ್ಲಿ ಹೇಳಿದ್ದಾರೆ. ಇದೇ ವೇಳೆ ಅಂದು ಸಂಜೆ 5 ಗಂಟೆಗೆ ಅವರು ಕರೊನಾ ವಾರಿಯರ್ಸ್‍ಗೆ ತಮ್ಮ ಕೃತಜ್ಞತೆಯನ್ನೂ ಅವರು ಸಮರ್ಪಿಸಿದ್ದಾರೆ.

ಕೋವಿದ್ -19 ಕುರಿತಾಗಿ ಸಾರ್ವಜನಿಕರಿಗೆ ಇರುವ ಸಂದೇಹಗಳನ್ನು ನಿವಾರಿಸುವ ಸಲುವಾಗಿ ಸರ್ಕಾರ ವಾಟ್ಸ್‌ಆಯಪ್ ಜತೆಗೂಡಿ ಹೆಲ್ಪ್ ಡೆಸ್ಕ್ ಒಂದನ್ನು ಆರಂಭಿಸಿದೆ. ಈ ಸಹಾಯವಾಣಿ ಸಂಖ್ಯೆ 9013151515. ಈ ಸಂಖ್ಯೆಗೆ ನಮಸ್ತೆ ಎಂದು ಇಂಗ್ಲಿಷ್‍ನಲ್ಲೋ, ಹಿಂದಿಯಲ್ಲೋ ಸಂದೇಶ ರವಾನಿಸಿದರೆ ನಿಮಗೆ ಕರೊನಾ ಕುರಿತ ಮಾಹಿತಿಗಳ ವಿನಿಮಯ ಆರಂಭವಾಗುತ್ತದೆ.

ಮಹಾಭಾರತ ಯುದ್ಧ ಗೆಲ್ಲೋದಕ್ಕೆ 18 ದಿನ ಬೇಕಾಯಿತು, ಕರೊನಾ ವಿರುದ್ಧದ ಇಡೀ ದೇಶ ಕೈಗೊಂಡಿರುವ ಈ ಸಮರ 21 ದಿನಗಳ ಕಾಲ ನಡೆಯಲಿದೆ. 21 ದಿನಗಳಲ್ಲಿ ಈ ಯುದ್ಧವನ್ನು ಗೆಲ್ಲುವ ಉದ್ದೇಶ ನಮ್ಮದು. ಈ ಹೋರಾಟದಲ್ಲಿ ಕೆಲಸ ಮಾಡುತ್ತಿರುವ ಡಾಕ್ಟರ್‍ಗಳು, ನರ್ಸ್‍ಗಳು ಮತ್ತು ಇತರೆ ವೃತ್ತಿಪರರ ಜತೆಗೆ ಯಾರು ಸಹಕರಿಸುವುದಿಲ್ಲವೋ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಾನು ಗೃಹ ಸಚಿವಾಲಯಕ್ಕೆ ಮತ್ತು ಎಲ್ಲ ರಾಜ್ಯಗಳ ಡಿಜಿಪಿಗಳಿಗೂ ಹೇಳಿದ್ದೇನೆ.

ಜನರಲ್ಲೂ ನನ್ನದೊಂದು ಮನವಿ ಇದೆ. ಎಲ್ಲಿಯಾದರೂ ಕರೊನಾ ವಾರಿಯರ್ಸ್‍ ಅಂದರೆ ಡಾಕ್ಟರ್ಸ್‍, ನರ್ಸುಗಳ ಜತೆಗೆ ಯಾರಾದರೂ ಕೆಟ್ಟದಾಗಿ ವರ್ತಿಸುವುದು ಕಂಡರೆ ಅಂತಹ ಜನರಿಗೆ (ಹೆಲ್ತ್ ಕೇರ್ ಪ್ರೊಫೆಷನಲ್ಸ್ ಜತೆಗೆ ಕೆಟ್ಟದಾಗಿ ವರ್ತಿಸುವ ಜನರು) ಅವರು ಮಾಡುತ್ತಿರುವುದು ತಪ್ಪು ಎಂಬುದನ್ನು ಮನವರಿಕೆ ಮಾಡಿಕೊಡಲು ನೀವೂ ಪ್ರಯತ್ನಿಸಿ.

ಈ ಸಂಕಷ್ಟ ಮಯ ಸನ್ನಿವೇಶದಲ್ಲಿ ಜನರು ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೋ ಅದಕ್ಕೆ ಕೊಡಬೇಕೇ ಹೊರತು ಬೇರೆಯದಕ್ಕಲ್ಲ. ಭಾರತದಲ್ಲಿ ಆಗುತ್ತಿರುವುದು ಇದೇ ಆಗಿದೆ. ಫ್ಯಾಕ್ಟ್‍ಗಳೇನು ಎಂಬುದನ್ನು ಜನ ಅರಿಯಬೇಕು. ರೂಮರ್’ಗಳನ್ನು ನಂಬಬಾರದು. ಕೋವಿದ್ 19 ವೈರಾಣು ಬಡವ ಬಲ್ಲಿದ ಅಥವಾ ಇನ್ನಾವುದೇ ರೀತಿಯಲ್ಲೂ ಬೇಧಭಾವ ತೋರುವುದಿಲ್ಲ. ಇವರು ಯಾರೋ ನಿತ್ಯವೂ ಯೋಗ ಅಥವಾ ವ್ಯಾಯಾಮಾ ಮಾಡುತ್ತಿದ್ದಾರಲ್ಲ, ಇವರನ್ನು ಬಿಟ್ಟು ಬಿಡೋಣ ಎಂದೂ ಯೋಚಿಸುವುದಿಲ್ಲ. ಇದನ್ನ ಅರ್ಥಮಾಡಿಕೊಂಡು ಸರ್ಕಾರ ನೀಡುವ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಪ್ರಧಾನಿ ಹೇಳಿದರು.

ನಾನು ವಾರಾಣಸಿಯ ಸಂಸದನಾಗಿದ್ದು, ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ನಾನು ನಿಮ್ಮ ಜತೆಗೆ ಇರಬೇಕಾಗಿತ್ತು. ಆದರೆ ನಿಮಗೆ ದೆಹಲಿಯ ಬೆಳವಣಿಗೆಗಳ ಅರಿವು ಇದೆ. ನಾನಿಲ್ಲಿ ಕರ್ತವ್ಯ ನಿರತನಾಗಿದ್ದರೂ ನಿತ್ಯವೂ ವಾರಾಣಸಿಗೆ ಸಂಬಂಧಿಸಿ ನನ್ನ ಸಹೋದ್ಯೋಗಿಗಳಿಂದ ಮಾಹಿತಿಯನ್ನು ಪಡೆಯುತ್ತಿದ್ದೇನೆ ಎಂದು ಇದೇ ವೇಳೆ ವಾರಾಣಸಿಯ ಜನರಿಗೆ ಧೈರ್ಯ ತುಂಬಿದರು.

(ಎನ್.ಬಿ)

Leave a Reply

comments

Related Articles

error: