ಮೈಸೂರು

ದೂರಾಲೋಚನೆಗಳಿಲ್ಲದ, ದುರಾಲೋಚನೆಗಳಿಂದ ಕೂಡಿದ ನೀರಸ ಬಜೆಟ್ : ಗಣ್ಯರ ಪ್ರತಿಕ್ರಿಯೆ

ಸಿದ್ದರಾಮಯ್ಯ ತಮ್ಮ 12ನೇ ಬಜೆಟ್ ಮಂಡಿಸಿದ್ದಾರೆ. ಆದರೆ ಅವರ ಬಜೆಟ್ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಬಿಜೆಪಿ ಮುಖಂಡರು ಹಾಗೂ ರೈತ ಮುಖಂಡರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ದುರಾಲೋಚನೆಯಿಂದಷ್ಟೇ ಕೂಡಿರುವ ತುಷ್ಠೀಕರಣದ ಬಜೆಟ್ ಎಂದು ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್ ಟೀಕಿಸಿದ್ದಾರೆ.

ರಾಜ್ಯದ ಖಜಾನೆ ಬರಿದಾದರೂ ಪರವಾಗಿಲ್ಲ. ರಾಜ್ಯದ ಅಭಿವೃದ್ಧಿ ಕುಂಠಿತವಾದರೇನು? ಚುನಾವಣೆಯಲ್ಲಿ ಕೆಲವು ಓಟು ಜಾಸ್ತಿ ಸಿಗಬಹುದೇನೋ ಎನ್ನುವ ಉದ್ದೇಶದಿಂದಲೇ ಈ ಬಜೆಟ್ ಮಂಡನೆಯಾಗಿದೆ. ರೈತರ ಕೃಷಿ ಸಾಲ ಮನ್ನಾ, ಕೃಷಿ ಚಟುವಟಿಗಳಿಗೆ ಉತ್ತೇಜನ ನೀಡುವಂತಹ ಕ್ರಮಗಳು ಬಜೆಟ್ ನಲ್ಲಿ ಇರಬಹುದು ಎಂದುಕೊಂಡ ರೈತಾಪಿ ವರ್ಗಕ್ಕೆ ನಿರಾಸೆ ಉಂಟುಮಾಡುವ ನೀರಸ ಬಜೆಟ್ ಆಗಿದೆ ಎಂದರು. ಸಾಲಮನ್ನಾ ಮಾಡಿ ರೈತರ ಹೊರೆ ಇಳಿಸುವ ಬದಲು ಇನ್ನಷ್ಟು ಸಾಲ ನೀಡಿ ರೈತರ ಭಾರ ಹೆಚ್ಚಿಸುವ ಯತ್ನದಲ್ಲಿದ್ದಾರೆ. ಈಗಾಗಲೇ ಮಳೆ ಕೈಕೊಟ್ಟು ರಾಜ್ಯ ಭೀಕರ ಬರಗಾಲ ಎದುರಿಸುತ್ತಿದ್ದರೆ ಬರ ಪರಿಹಾರ ಕಾಮಗಾರಿಗಳ ಯಾವುದೇ ಪ್ರಯತ್ನ ಕಂಡು ಬರುತ್ತಿಲ್ಲ. ದೂರಾಲೋಚನೆಗಳಿಲ್ಲದೆ ಬರಿಯ ಚುನಾವಣಾ ದುರಾಲೋಚನೆಯಷ್ಟೇ ಇದೆ ಎಂದು ತಿಳಿಸಿದರು.

ಈಗಾಗಲೇ ರಾಜ್ಯ ಸರ್ಕಾರದ ಮೇಲೆ 1ಲಕ್ಷ ಕೋಟಿಗೂ ಅಧಿಕ ಸಾಲದ ಹೊರೆ ಇದ್ದರೂ, ಅದರ ಬಗ್ಗೆ ಒಂದಿಷ್ಟು ಕಾಳಜಿ ವಹಿಸದೇ 1.8ಲಕ್ಷಕೋಟಿ ಮೊತ್ತದ ಮಿಗತೆ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಮುಂದಿನ ಸರ್ಕಾರಕ್ಕೆ ಖಾಲಿ ಬೊಕ್ಕಸ ಹಾಗೂ ಲಕ್ಷಾಂತರ ಮೊತ್ತದ ಸಾಲವನ್ನಷ್ಟೇ ಉಳಿಸಿ ಆರ್ಥಿಕ ಸಂಕಷ್ಟ ಉಂಟು ಮಾಡುವ ಯೋಚನೆಯಲ್ಲಿದ್ದಾರೆ ಎಂದಿದ್ದಾರೆ.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಮಾತನಾಡಿ ಸಿದ್ದರಾಮಯ್ಯನವರ ಬಜೆಟ್ ನಿರಾಸೆಯನ್ನು ಮೂಡಿಸಿದೆ. ಈ ಬಜೆಟ್ ಸಂಪೂರ್ಣ ರೈತ ವಿರೋಧಿಯಾಗಿದೆ. ಹಳೆಯ ಯೋಜನೆಯನ್ನೇ ಪುನಃ ಹೇಳಲಾಗಿದೆ. ರೈತರ ಸಾಲ ಮನ್ನಾ ಮಾಡಲು ಇವರಿಗೆ ಆಗಲ್ಲ. ಮೂರು ವರ್ಷದಿಂದ ಬರ ರಾಜ್ಯದಲ್ಲಿ ತಾಂಡವವಾಡುತ್ತಿದ್ದರೂ ಮುಖ್ಯಮಂತ್ರಿಗಳು ರೈತ ವಿರೋಧಿ ಬಜೆಟ್ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. (ಎಸ್.ಎನ್-ಎಸ್.ಎಚ್)

 

 

Leave a Reply

comments

Related Articles

error: