ಮೈಸೂರು

ಒಡವೆ ಹರಾಜು ಹಾಕಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ : ರೈತ ರಾಮಯ್ಯ ಎಚ್ಚರಿಕೆ

 ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವುದರಿಂದ ರೈತರ ಸಾಲ ವಸೂಲಾತಿ ಹಾಗೂ ಒಡವೆ ಹರಾಜು ಹಾಕುವುದನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದರೂ  ಕೂಡಾ ಮದ್ದೂರಿನ ಶಿಂಷಾ ಸಹಕಾರ ಬ್ಯಾಂಕ್‍ನ ಅಧಿಕಾರಿಗಳು ಮಾತ್ರ ಯಾವುದೇ ಕಿಮ್ಮತ್ತೂ ನೀಡದೆ ಬ್ಯಾಂಕ್‍ನಲ್ಲಿ ಅಡವಿಟ್ಟ ಒಡವೆಗಳನ್ನು ಹರಾಜು ಹಾಕಲು ಮುಂದಾಗಿದ್ದು.  ಬೇಸತ್ತ ಚಾಮನಹಳ್ಳಿ ಗ್ರಾಮದ ರೈತ ರಾಮಯ್ಯ ಒಡವೆ ಹರಾಜು ಹಾಕಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಎಚ್ಚರಿಸಿದ್ದಾರೆ.

 ಮಂಡ್ಯದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಶಿಂಷಾ ಸಹಕಾರ ಬ್ಯಾಂಕ್ ನಲ್ಲಿ ಚಿನ್ನಾಭರಣಗಳನ್ನು 2013ರಲ್ಲಿ 42 ಸಾವಿರ ರೂ.ಗಳಿಗೆ ಅಡವಿಟ್ಟಿದ್ದು, ಈಗ ಅದು ಬಡ್ಡಿ 29,779 ರೂ. ಸೇರಿ ಸುಮಾರು 72,279 ರೂ.ಗಳಾಗಿದ್ದು, ಈ ಹಣವನ್ನು ಕಟ್ಟಿ ಕೂಡಲೇ ಒಡವೆ ಬಿಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮಾ.23ರಂದು ಹರಾಜು ಹಾಕಲಾಗು ವುದು ಎಂದು ಬ್ಯಾಂಕ್‍ನಿಂದ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಲ ವಸೂಲಾತಿ, ಒಡವೆ ಹರಾಜು ಹಾಕಬಾರದು ಎಂದು ಬ್ಯಾಂಕ್‍ಗಳಿಗೆ ಸೂಚನೆ ನೀಡಿದ್ದರೂ, ಅದನ್ನು ಧಿಕ್ಕರಿಸಿ ಬ್ಯಾಂಕ್‍ನವರು ಹರಾಜು ಹಾಕಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಆದೇಶಕ್ಕೂ ಕಿಮ್ಮತ್ತಿಲ್ಲದಂತಾಗಿದೆ. ಮನ್ನಾ ಮಾಡುವುದು ಬೇಡ. ಕಾಲಾವಕಾಶ ನೀಡಿದರೆ ಹಣ ಕಟ್ಟಿ ಬಿಡಿಸಿಕೊಳ್ಳಲಾಗುವುದು ಎಂದು ಬ್ಯಾಂಕ್‍ನವರಿಗೆ ಮನವಿ ಮಾಡಿದರೆ ಮನವಿಯನ್ನು ತಿರಸ್ಕರಿಸುತ್ತಾರೆ. ಯಾವುದೇ ಕಾರಣಕ್ಕೂ ಹರಾಜು ಹಾಕುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ನನ್ನ ಹೆಂಡತಿ, ಒಬ್ಬ ಮಗ, ಇಬ್ಬರು ಪುತ್ರಿಯರು ಕ್ಯಾನ್ಸರ್‍ನಿಂದ ಸಾವನ್ನಪ್ಪಿದ್ದು, ಇವರ ಚಿಕಿತ್ಸೆಗಾಗಿ ತುಂಬಾ ಹಣ ಖರ್ಚು ಮಾಡಿದ್ದೇನೆ. ನನ್ನ ಇಡೀ ಕುಟುಂಬವೇ ಸಾವನ್ನಪ್ಪಿದ್ದರೂ ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳದೆ ಆತ್ಮಸ್ಥೈರ್ಯ ದಿಂದ ಬದುಕು ಸಾಗಿಸುತ್ತಿದ್ದೇನೆ. ಇರುವ ಒಂದು ಎಕರೆ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದೆ. ಆದರೆ ಎರಡು ವರ್ಷಗಳಿಂದ ಭೀಕರ ಬರಗಾಲದಿಂದ ಮಳೆ ಬೆಳೆ ಇಲ್ಲದೆ, ಜೀವನ ಕಷ್ಟಕರವಾಗಿದೆ. ಇಂಥ ಸಂದರ್ಭದಲ್ಲಿ ಬ್ಯಾಂಕ್‍ನವರು ಹಣ ಕಟ್ಟುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಬ್ಯಾಂಕ್‍ನವರು ಒಡವೆ ಹರಾಜು ಹಾಕಿದರೆ ಖಂಡಿತ ವಾಗಿ ಆತ್ಮಹತ್ಯೆ ಮಾಡಿಕೊಳ್ಳು ತ್ತೇನೆ. ನನ್ನ ಶವದ ಮೇಲೆ ಹರಾಜು ಹಾಕಲಿ. ನನ್ನ ಸಾವಿನಿಂದಲಾದರೂ ಅಧಿಕಾರಿಗಳು ಎಚ್ಚೆತ್ತು ಕೊಂಡು ನನ್ನಂತೆಯೇ ಕಷ್ಟದಲ್ಲಿ ರುವ ರೈತರಿಗೆ ತೊಂದೆರೆ ನೀಡದಿರಲಿ ಎಂದು ಹೇಳಿದರು.
ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಬ್ಯಾಂಕ್‍ನವರಿಗೆ ಸೂಚನೆ ನೀಡಿ ಒಡವೆ ಹರಾಜು ಹಾಕುವುದನ್ನು ತಡೆದು, ಕಾಲಾವಕಾಶ ನೀಡಬೇಕೆಂದು ಕೋರಿಕೊಂಡರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: