ಮೈಸೂರು

ಸರ್ಕಾರದ ಲಾಕ್ ಡೌನ್ ಪಾಲಿಸಿ ಕಾರ್ಮಿಕರಿಗೆ ರಜೆ ನೀಡಿದ್ದರೆ ನಂಜನಗೂಡಿಗೆ ಬರುತ್ತಿರಲಿಲ್ಲ ಕೊರೋನಾ : ಸಾರ್ವಜನಿಕರ ಅಭಿಮತ

ಮೈಸೂರು,ಮಾ.30:- ನಂಜನಗೂಡಿಗೆ ಪ್ರಪ್ರಥಮವಾಗಿ ಕೊರೋನಾ ಎಂಬ ಮಹಾಮಾರಿ ವೈರಸ್ ತಂದು  ಹಂಚಿದ ಕೀರ್ತಿ ಜ್ಯುಬಿಲಿಯಂಟ್ ಕಾರ್ಖಾನೆಗೆ  ಸಲ್ಲುತ್ತದೆ ಎಂದು ಹೇಳಿದರೂ ತಪ್ಪಾಗಲಾರದು. ಯಾಕೆಂದರೆ ಸರ್ಕಾರದ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಾರ್ಮಿಕರಿಗೆ ರಜೆ ನೀಡಿದ್ದರೆ ನಂಜನಗೂಡಿಗೆ ಕೊರೋನಾ ಪ್ರವೇಶಿಸುತ್ತಲೇ ಇರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ನಂಜನಗೂಡು ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ  ಜ್ಯುಬಿಲಿಯಂಟ್  ಔಷಧಿ ತಯಾರಿಕಾ ಕಾರ್ಖಾನೆ ಇದಾಗಿದ್ದು, ಈ ಕಾರ್ಖಾನೆಯಲ್ಲಿ ನೌಕರನಾಗಿದ್ದ ವ್ಯಕ್ತಿಯೋರ್ವನಿಗೆ ಕೊರೋನವೈರಸ್ ದೃಢಪಟ್ಟಿದ್ದು ಜಿಲ್ಲೆಯ ಮೂರನೇ ಸೋಂಕಿತ ವ್ಯಕ್ತಿ ಯಾಗಿದ್ದ. ಇದರಿಂದ ಬೆಚ್ಚಿಬಿದ್ದ ಜಿಲ್ಲಾ ಮತ್ತು ತಾಲೂಕು ಆಡಳಿತ ಕಾರ್ಖಾನೆಗೆ ತೆರಳಿ ಆತನ ಜೊತೆ ಸಂಪರ್ಕದಲ್ಲಿದ್ದ ವರನ್ನು ಸೇರಿದಂತೆ ಅಲ್ಲಿನ ಸಾವಿರಾರು ಕಾರ್ಮಿಕರಿಗೆ ಕ್ವಾರೆಂಟೈನ್ ಸೀಲ್ ಹಾಕಿ ಎಲ್ಲರನ್ನೂ ಹೋಂ ಕ್ವಾರಂಟೈನ್ ನಲ್ಲಿರುವಂತೆ ಕಟ್ಟುನಿಟ್ಟಿನ ಆದೇಶ ಮಾಡಿ ಕಾರ್ಖಾನೆಗೂ ಸಹ ಬೀಗ ಜಡಿಯಲಾಗಿತ್ತು.  ವಿಪರ್ಯಾಸವೆಂದರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊದಲಿನ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ವರನ್ನು ತಪಾಸಣೆಗೆ ಒಳಪಡಿಸಿದಾಗ ಮತ್ತೆ ಐವರಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆಯಲ್ಲದೆ ನಂಜನಗೂಡನ್ನು ಕೊರೋನಾ  ರೆಡ ಝೋನ್  ಎಂದು ಘೋಷಣೆ ಮಾಡಿ ಎಲ್ಲಾ ಕಡೆಯಿಂದ ನಂಜನಗೂಡಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇದರಿಂದ ನಂಜನಗೂಡು ಮತ್ತು ಸುತ್ತಮುತ್ತಲಿನ ಜನತೆ ದಿಗ್ಭ್ರಮೆಗೆ ಒಳಗಾಗಿ ಭಯಭೀತರಾಗಿದ್ದಾರೆ. ಕಾರ್ಖಾನೆಯ  ನೌಕರರು ನಂಜನಗೂಡು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ. ಆದರೆ ಅದರಲ್ಲಿ ಕೆಲವರು ಇದ್ಯಾವುದನ್ನು ಲೆಕ್ಕಿಸದೇ  ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಿರು ಗಾಡುತ್ತಿರುವುದರಿಂದ ಜನರು ಗಾಬರಿಯಾಗಿದ್ದಾರೆ.

ಈ ಸೋಂಕಿತ ಆರು ಜನರಿಂದ ಇನ್ನೆಷ್ಟು ಅಮಾಯಕ ಜನರಿಗೆ ಹರಡಿದೆಯೋ ಎಂಬ ಆತಂಕ ನಂಜನಗೂಡಿನ ಜನತೆಗೆ ಎದುರಾಗಿ ಮನೆಯಿಂದ ಹೊರ ಬರಲು ಹಿಂದೇಟು ಹಾಕಿ ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಈ ಸೂಕ್ಷ್ಮ ಘಟನೆಯಿಂದ ಎಚ್ಚೆತ್ತ ನಂಜನಗೂಡು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಾಗಿಲು ಮುಚ್ಚಿಸಿ ಯಾವುದೇ  ವಾಹನಗಳು ಮತ್ತು ಸಾರ್ವಜನಿಕರು ರಸ್ತೆಗೆ ಇಳಿಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಿದೆ. ಈ ಘಟನೆಯಿಂದ ಇಡೀ ನಂಜನಗೂಡು ಸ್ತಬ್ಧವಾಗಿ ಒಂದು ರೀತಿ ಸ್ಮಶಾನ ಮೌನ ಆವರಿಸಿದಂತಾಗಿದೆ.

ಒಟ್ಟಾರೆ ಇಂತಹ ದೊಡ್ಡ ದೊಡ್ಡ ಕಾರ್ಖಾನೆಗಳು ಜನತಾ ಕರ್ಫ್ಯೂ ಮತ್ತು    ಲಾಕ್ ಡೌನ್  ಗಳನ್ನು ಪರಿಪಾಲಿಸಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲವೇನೋ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: