ಕರ್ನಾಟಕಪ್ರಮುಖ ಸುದ್ದಿ

ಜಿಲ್ಲೆಯಲ್ಲಿ ಒಟ್ಟು 9 ಫೀವರ್ ಕ್ಲಿನಿಕ್‍ಗಳನ್ನು ನಿರ್ಮಿಸಲಾಗಿದೆ: ಮಂಡ್ಯ ಜಿಲ್ಲಾಧಿಕಾರಿ

ಮಂಡ್ಯ (ಮಾ.30): ವಿವಿಧ ದೇಶಗಳಿಂದ ಬಂದ 134 ಜನರನ್ನು ಸ್ಟ್ಯಾಂಡೆಡ್ ಆಪರೆಟಿಂಗ್ ಪ್ರೊಸಿಜರ್’ನಂತೆ ಜಿಲ್ಲಾಡಳಿತದ ನಿಗಾದಲ್ಲಿ 14 ದಿವಸಗಳ ಕಾಲ ಗೃಹ ಬಂಧನದಲ್ಲಿ ಇರಿಸಲಾಗಿದೆ. ಪ್ರತಿದಿನ ಕೋವಿಡ್-19ರ ರೋಗ ಲಕ್ಷಣಗಳ ಬಗ್ಗೆ ಪರಿಶೀಲನೆಯನ್ನು ಮಾಡಲಾಗುತ್ತಿದೆ. ಅವರಿಗೆ ರೋಗ ಲಕ್ಷಣಗಳು ಕಂಡು ಬಂದರೆ, ನಮ್ಮ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಲು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಜಿಲ್ಲೆಯಲ್ಲಿ ಒಟ್ಟು 9 ಫೀವರ್ ಕ್ಲಿನಿಕ್‍ಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಪ್ರತಿ ತಾಲ್ಲೂಕಿನಲ್ಲಿರುವ ತಾಲ್ಲೂಕು ಆಸ್ಪತ್ರೆಗಳನ್ನು ಕೋವಿಡ್ ಫೀವರ್ ಕ್ಲಿನಿಕ್‍ಗಳನ್ನಾಗಿ ಮಾರ್ಪಾಡಾಗಿವೆ.

ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿರುವ ವೈದ್ಯರುಗಳಿಗೆ, ಪ್ಯಾರಮೆಡಿಕಲ್ ಸಿಬ್ಬಂದಿಗಳಿಗೆ ಹಾಗೂ ಲ್ಯಾಬ್ ಟೆಕ್ನಿಷಿಯನ್‍ಗಳಿಗೆ ತರಬೇತಿಯನ್ನು ನೀಡಲಾಗಿದೆ. ಅವರು ಸರ್ಕಾರ ನೀಡಿರುವಂತಹ ಸ್ಟ್ಯಾಂಡೆಡ್ ಆಪರೆಟಿಂಗ್ ಪ್ರೊಸಿಜರ್‍ನಂತೆ ಫೀವರ್ ಕೇಸ್‍ಗಳನ್ನು ಕೋವಿಡ್-19 ಬಾಧಿತ ಪ್ರಕರಣಗಳನ್ನು ಮತ್ತು ಸಂಶಯಾತ್ಮಕ ಪ್ರಕರಣಗಳಿಗೆ ಚಿಕಿತ್ಸೆಯನ್ನು ನೀಡಲಿದ್ದಾರೆ ಎಂದು ಹೇಳಿದರು.

ಒಂದು ವೇಳೆ ಕೋವಿಡ್- 19 ದೃಢಪಟ್ಟರೆ ಮೆಡಿಕಲ್ ಕಾಲೇಜಿಗೆ ಮಾಹಿತಿಯನ್ನು ತಿಳಿಸುವರು. ಮಂಡ್ಯ ನಗರದಲ್ಲಿ ಒಟ್ಟು 3 ಫೀವರ್ ಕ್ಲಿನಿಕ್‍ಗಳನ್ನು ಸ್ಥಾಪನೆ ಮಾಡಿದ್ದೇವೆ. ಅರ್ಬನ್ ಹೆಲ್ತ್ ಸೆಂಟರ್‍ಗಳು ಫೀವರ್ ಕ್ಲಿನಿಕ್‍ಗಳಾಗಿ ಪರಿವರ್ತನೆಯಾಗಿವೆ. ಈಗಾಗಲೆ ಖಾಸಗಿ ಆಸ್ಪತ್ರೆಯ ಅಸೋಶಿಯೆಷನ್‍ನ ಅಧ್ಯಕ್ಷರು, ಮಾಲೀಕರು, ಇಂಡಿಯನ್ ಮೆಡಿಕಲ್ ಅಸೋಶಿಯೇಷನ್‍ನ ಅಧ್ಯಕ್ಷರೊಂದಿಗೆ ಸಭೆಯನ್ನು ನಡೆಸಲಾಗಿದೆ. ಖಾಸಗಿ ವೈದ್ಯರಿಗೆ ಸೂಕ್ತ ರಕ್ಷಣೆ ಮತ್ತು ಮುನ್ನೆಚರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿಕೆ ಸಲ್ಲಿಸಿದ್ದಾರೆ. ಅದರಂತೆ ಜಿಲ್ಲಾಡಳಿತ ಸಕರಾತ್ಮಕವಾಗಿ ಸ್ಪಂದಿಸಲಿದೆ ಎಂದು ತಿಳಿಸಿದರು.

ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಖಾಸಗಿ ವೈದ್ಯರ ಜೊತೆ ಸಂಯಮದಿಂದ ಶಾಂತಿಯುತವಾಗಿ ನಡೆದುಕೊಳ್ಳಬೇಕು. ಅವರು ನೀಡುವಂತಹ ಸಲಹೆಗಳನ್ನು ಹಾಗೂ ನಿರ್ದೇಶನಗಳನ್ನು ಎಲ್ಲ ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಜ್ವರ, ಕೆಮ್ಮು ನೆಗಡಿ ಮತ್ತು ಉಸಿರಾಟದ ತೊಂದರೆಯ ಪ್ರಕರಣಗಳು ಖಾಸಗಿ ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಮುಂಜಾಗ್ರತ ಕ್ರಮವಾಗಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಫೀವರ್ ಕ್ಲೀನಿಕ್‍ಗಳಿಗೆ ಅಥವಾ ಮಂಡ್ಯ ಮೆಡಿಕಲ್ ಕಾಲೇಜಿಗೆ ಕಳುಹಿಸುತ್ತೇವೆ ಎಂದು ವೈದ್ಯರು ಹೇಳಿದ್ದಾರೆ. ಇದಕ್ಕೂ ಕೂಡ ಅವಕಾಶವನ್ನು ಜಿಲ್ಲಾಡಳಿತ ನೀಡದೆ ಎಂದು ತಿಳಿಸಿದರು.

ಖಾಸಗಿ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಯಾರಾದರು ದಬ್ಬಾಳಿಕೆ ನಡೆಸುವಂತಹ ಅಥವಾ ಕಿರುಕುಳ ನೀಡುವಂತಹ ಪ್ರಕರಣಗಳು ಕಂಡುಬಂದರೆ, ಐಪಿಸಿ ಸೆಕ್ಷನ್ 188ರಂತೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಪೊಲೀಸರಿಗೆ ನಿರ್ದೇಶನವನ್ನು ನೀಡಲಾಗಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ರೋಗಿಗಳ ಜೊತೆ ಇರಲು ಒಬ್ಬರು ಅಥವಾ ಇಬ್ಬರಿಗೆ ಅವಕಾಶವನ್ನು ನೀಡಲಾಗಿದೆ. ಗುಂಪು-ಗುಂಪಾಗಿ ಬಂದು ಸಮಸ್ಯೆಗೆ ಅವಕಾಶ ಮಾಡಿಕೊಟ್ಟ ಸಂದರ್ಭದಲ್ಲಿ ಐಪಿಸಿ ಸೆಕ್ಷನ್. 269,270 ಹಾಗೂ271ರ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಹೆಚ್ಚಿನ ರೀತಿಯ ಮಾಸ್ಕ್’ಗಳ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ವೈದ್ಯರು, ಮಾಧ್ಯಮದವರು ಹಾಗೂ ಆಡಳಿತ ಸಿಬ್ಬಂದಿಗಳು ಮಾಸ್ಕ್ ಧರಿಸಬೇಕು. ಆದರೆ ಮನೆಯಲ್ಲಿರುವವರು ಅಥವಾ ಗ್ರಾಮೀಣ ಪ್ರದೇಶದಲ್ಲಿರುವವರು ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಅಗತ್ಯ ಇರುವವರಿಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮಾಸ್ಕ್ಅನ್ನು ವಿತರಿಸುತ್ತದೆ ಎಂದು ತಿಳಿಸಿದರು.

ಇಲ್ಲಿಯವರೆಗೂ ವಿದೇಶದಿಂದ ಬಂದವರಲ್ಲಿ ಮಾತ್ರ ಸೋಂಕು ಪತ್ತೆಯಾಗುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಕೋವೀಡ್-19 ಸಮುದಾಯದಲ್ಲಿಯೂ ಕೂಡ ಹರಡುವ ಸಾಧ್ಯತೆ ಕಾಣಿಸುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯಾದ ಡಾ.ಮಂಚೇಗೌಡ, ಜಿಲ್ಲಾ ವಾರ್ತಾಧಿಕಾರಿಗಳಾದ ಟಿ.ಕೆ ಹರೀಶ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: