ಪ್ರಮುಖ ಸುದ್ದಿ

ಮೀನು ಮತ್ತು ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲು ಎಸ್‍ಡಿಪಿಐ ಮನವಿ

ರಾಜ್ಯ( ಮಡಿಕೇರಿ) ಮಾ.31 :- ಜನರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಲಾಕ್‍ಡೌನ್ ಆದೇಶ ಜಾರಿಯಲ್ಲಿದ್ದು, ಇದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಮಕ್ಕಳು ಹಾಗೂ ರೋಗಿಗಳಿಗೆ ಪ್ರೊಟೀನ್ ಯುಕ್ತ ಆಹಾರ ಅತ್ಯವಶ್ಯಕವಾಗಿರುವುದರಿಂದ ಮೀನು ಮತ್ತು ಮಾಂಸ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಮನವಿ ಮಾಡಿದೆ.
ಮಾಧ್ಯಮ ಪ್ರಕಟಣೆ ನೀಡಿರುವ ಎಸ್‍ಡಿಪಿಐ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಅಬೂಬಕ್ಕರ್ ಲಾಕ್‍ಡೌನ್ ಆದೇಶ ಜಾರಿಯಲ್ಲಿದ್ದರೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಆಯಾ ಜಿಲ್ಲಾಡಳಿತಕ್ಕೆ ಕೆಲವು ನಿಯಮಗಳನ್ನು ಸೂಚಿಸಿದೆ. ಪಡಿತರ, ಹಾಲು, ತರಕಾರಿ, ದಿನಸಿ, ಆಹಾರ, ಮಾಂಸ, ಮೀನು ಮತ್ತು ಹಣ್ಣುಗಳ ಸಗಟು ಹಾಗೂ ಚಿಲ್ಲರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಇದರಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಮೀನು ಮತ್ತು ಮಾಂಸ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಇದು ಸರಿಯಾದ ಕ್ರಮವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
ರೋಗ ನಿರೋಧಕ ಶಕ್ತಿಯನ್ನು ಹೊಂದಲು ಪ್ರೊಟೀನ್‍ಯುಕ್ತ ಆಹಾರ ಮುಖ್ಯವಾಗಿದೆ. ಆದ್ದರಿಂದ ತಕ್ಷಣ ಜಾರಿಗೆ ಬರುವಂತೆ ಅಗತ್ಯ ವಸ್ತುಗಳ ಜೊತೆಗೆ ಮೀನು ಮತ್ತು ಮಾಂಸ ಮಾರಾಟಕ್ಕೆ ಜಿಲ್ಲೆಯಾದ್ಯಂತ ಅವಕಾಶ ಕಲ್ಪಿಸಿಕೊಡಬೇಕೆಂದು ಅಬೂಬಕ್ಕರ್ ಮನವಿ ಮಾಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: