ಪ್ರಮುಖ ಸುದ್ದಿ

ಅಗತ್ಯ ದಿನಸಿ ವಸ್ತುಗಳ ಖರೀದಿಗೆ ಜಿಲ್ಲಾಡಳಿತದಿಂದ ವೆಬ್‍ಸೈಟ್ ಆರಂಭ

ರಾಜ್ಯ( ಮಡಿಕೇರಿ) ಮಾ.31 :- ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾ ಪೊಲೀಸ್ ವಿನೂತನ ಕ್ರಮಗಳಿಗೆ ಮುಂದಾಗಿದೆ.
ಕರೋನಾ ಸೋಂಕು ವ್ಯಾಪಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜನ ಗುಂಪುಗುಂಪಾಗಿ ದಿನಸಿ ಅಂಗಡಿಗಳಿಗೆ ಬರುವುದನ್ನು ತಡೆಗಟ್ಟುವ ಪ್ರಯತ್ನವಾಗಿ ವೆಬ್ ಸೈಟ್ ರೂಪುಗೊಂಡಿದ್ದು ಈ ವೆಬ್‍ಸೈಟ್ ನಲ್ಲಿ ಜಿಲ್ಲೆಯ ಪ್ರಮುಖ ಊರುಗಳ 276 ದಿನಸಿ ಅಂಗಡಿಗಳ ಹೆಸರು ದಾಖಲಾಗಿದೆ.
ದಿನೇ ದಿನೇ ಬೆಳೆಯುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್-19 ರಿಂದ ಎದುರಾಗುವ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಜಿಲ್ಲಾಡಳಿತ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ಜನತೆಗೆ ದಿನ ನಿತ್ಯದ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಲಾಕ್‍ಡೌನ್‍ನ್ನು ಯಶಸ್ವಿಗೊಳಿಸಲು ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಸಹಯೋಗದೊಂದಿಗೆ ರೂಪಿಸಲಾಗಿರುವ ನೂತನ ಅಂತರ್ಜಾಲ ತಾಣವು ಗ್ರಾಹಕರ ಮತ್ತು ಸ್ಥಳೀಯ ವರ್ತಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ.
ಕೊಡಗು ಜಿಲ್ಲೆಯ ನಗರಗಳಲ್ಲಿ ದಿನಸಿ ಅಂಗಡಿಗಳಿಂದ ಗ್ರಾಹಕರಿಗೆ ದಿನಸಿ ಸರಬರಾಜು ಸುಲಭಗೊಳಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ಅಗತ್ಯ ದಿನಸಿ ವಸ್ತುಗಳ ಖರೀದಿಯ ಅವಶ್ಯಕತೆ ಇರುವವರು http//kodagu.letsart.in ವೆಬ್ ಸೈಟ್ ಲಾಗ್ ಇನ್ ಆಗಿ ತಮಗೆ ಬೇಕಾಗಿರುವ ದಿನಸಿ ಪಟ್ಟಿಯನ್ನು ದಾಖಲಿಸಿ, ತಮ್ಮ ಹೆಸರು, ವಿಳಾಸ ನೀಡಿದರೆ ದಿನಸಿ ಅಂಗಡಿಯಿಂದ ಅಂಗಡಿಯವರು ಸೂಚಿಸಿದ ಸಮಯದಲ್ಲಿ ದಿನಸಿ ಪಡೆಯಲು ಸಾಧ್ಯವಾಗಲಿದೆ.
ಸದ್ಯಕ್ಕೆ ದಿನಸಿ ಅಂಗಡಿಗಳಿಂದ ಮನೆಮನೆಗೆ ವಿತರಣೆ ಇಲ್ಲವಾದರೂ ಮುಂದಿನ ವಾರದಿಂದ ಮನೆಮನೆ ವಿತರಣೆ ಬಗ್ಗೆಯೂ ಜಿಲ್ಲಾಡಳಿತ ಚಿಂತನೆ ಹರಿಸುತ್ತಿದೆ.
ವೆಬ್‍ಸೈಟ್ ಕಾರ್ಯನಿರ್ವಹಣೆ ಹೇಗೆ?
http//kodagu.letsart.in ವೆಬ್ ಸೈಟ್ ಮೂಲಕ ಲಾಗ್ ಇನ್ ಆದವರು, ನೀಡುವ ದಿನಸಿ ಪಟ್ಟಿಯಂತೆ ಅಂಗಡಿ ಸಿಬ್ಬಂದಿಗಳು ದಿನಸಿ ಪ್ಯಾಕೆಟ್ ತಯಾರಿಸುತ್ತಾರೆ. ಈ ರೀತಿ ತಯಾರಾದ ಪ್ಯಾಕೆಟನ್ನು ಅವರು ಸೂಚಿಸಿದ ದಿನ ಮತ್ತು ಸಮಯದಲ್ಲಿ ಗ್ರಾಹಕರು ಪಡೆದುಕೊಳ್ಳಬಹುದು. ಜಿಲ್ಲಾಡಳಿತ ನಿಗದಿಪಡಿಸಿದ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ದಿನಸಿಯನ್ನು ಅಂಗಡಿಗಳಿಂದ ಪಡೆಯಲು ಸಾಧ್ಯವಿದೆ
ಇದರಿಂದಾಗಿ ದಿನಸಿ ಅಂಗಡಿಗಳಲ್ಲಿ ಗ್ರಾಹಕರು ಅನಗತ್ಯವಾಗಿ ಸರದಿ ಸಾಲಿನಲ್ಲಿ ನಿಲ್ಲುವ ಸಮಸ್ಯೆ ನಿವಾರಣೆಯಾಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸುಲಭ ಸಾಧ್ಯವಾಗಲಿದ್ದು, ಸೋಂಕು ತಡೆಗೂ ಸಹಕಾರಿಯಾಗುತ್ತದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: