ಪ್ರಮುಖ ಸುದ್ದಿ

‘ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ’ : ಕೂಲಿ ಕಾರ್ಮಿಕರ ಹಸಿವು ನೀಗಿಸಲು ಜಿಲ್ಲಾಡಳಿತದಿಂದ ವಿನೂತನ ಕಾರ್ಯಕ್ರಮ

ರಾಜ್ಯ( ಮಡಿಕೇರಿ) ಮಾ.31 :- ಕೊಡಗು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯು ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ ಎಂಬ ಯೋಜನೆ ಜಾರಿಗೊಳಿಸಿದೆ.
ಕೊರೋನಾ ಸೋಂಕು ಸಂಕಷ್ಟ ಸಂದರ್ಭದ ಈ ದಿನಗಳಲ್ಲಿ ಜಿಲ್ಲೆಯ ಹಲವೆಡೆ ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿ ಕಾರ್ಮಿಕರೂ ನಮ್ಮಂತೆಯೇ, ನಮ್ಮ ಅನ್ನದಲ್ಲಿ ಕೂಲಿ ಕಾರ್ಮಿಕರಿಗೊಂದು ತುತ್ತು ಕೊಡುವ ಯೋಚನೆ ಮಾಡಬೇಕು.
ನಾವು ಖರೀದಿಸುವ ಅಕ್ಕಿ, ಎಣ್ಣೆ, ಬೇಳೆಯಲ್ಲಿ ಒಂದಷ್ಟು ಪಾಲನ್ನು ಕೂಲಿ ಕಾರ್ಮಿಕರಿಗಾಗಿ ನೀಡುವಂತಾಗಬೇಕು. ಹಸಿದ ಹೊಟ್ಟೆ ತುಂಬಿಸಲು ಸಹಾಯ ಹಸ್ತ ಚಾಚಬೇಕು. ಈ ನಿಟ್ಟಿನಲ್ಲಿ ದಾನಿಗಳು, ಸಂಘ ಸಂಸ್ಥೆಗಳು ಕೂಲಿ ಕಾರ್ಮಿಕರು, ಬಡಮಂದಿಯ ನೆರವಿಗಾಗಿ ಸ್ಪಂದಿಸಬೇಕು.
‘ಹಸಿದ ಹೊಟ್ಟೆಗೆ – ತಣಿವು’ ಪೆಟ್ಟಿಗೆ ಎಂಬ ಯೋಜನೆಗೆ ಸಹಾಯ ನೀಡುವವರು ತಾವು ಅಂಗಡಿಗಳಲ್ಲಿ ತಮಗೆ ಬೇಕಾದಷ್ಟು ದಿನಸಿ ಖರೀದಿಸುವ ಸಂದರ್ಭ ತಾವು ಖರೀದಿ ಮಾಡಿದ್ದರಲ್ಲಿ ಒಂದಿಷ್ಟು ಪ್ರಮಾಣದ ಅಕ್ಕಿ, ಬೇಳೆ, ಹಿಟ್ಟು, ಎಣ್ಣೆ, ಮತ್ತಿತರ ಪಡಿತರವನ್ನು (ಹಣ್ಣು ಮತ್ತು ತರಕಾರಿಯನ್ನು ಹೊರತು ಪಡಿಸಿ) ಈ ಯೋಜನೆಯ ಪೆಟ್ಟಿಗೆಗೆ ಹಾಕಬಹುದು.
ವಾರದಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಜಿಲ್ಲಾಡಳಿತ ಸಡಿಲಿಸಿದ ಸಮಯ ಅಂದರೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಡಿಕೇರಿ ಹಳೇ ಖಾಸಗಿ ಬಸ್ ನಿಲ್ದಾಣ, ಸೋಮವಾರಪೇಟೆ, ಕುಶಾಲನಗರ ಖಾಸಗಿ ಬಸ್ ನಿಲ್ದಾಣ ವಿರಾಜಪೇಟೆ ಗಡಿಯಾರ ಕಂಬ, ಗೋಣಿಕೊಪ್ಪ ಬಸ್ ನಿಲ್ದಾಣಗಳಲ್ಲಿ ಇರಿಸಲಾಗಿರುವ ದೊಡ್ಡ ಪೆಟ್ಟಿಗೆಗಳಿಗೆ ನೀವು ನೀಡಲಿಚ್ಛಿಸುವ ಉತ್ತಮ ಗುಣಮಟ್ಟದ ದಿನಸಿ ಪದಾರ್ಥಗಳನ್ನು ಪೆಟ್ಟಿಗೆಗ ಹಾಕಿ ಸಹಕರಿಸಬೇಕು.
ದಾನಿಗಳು ಪೆಟ್ಟಿಗೆಗೆ ಹಾಕಿದ ಪಡಿತರವನ್ನು ಜಿಲ್ಲಾಡಳಿತ ಕೂಲಿ ಕಾರ್ಮಿಕರಿಗೆ, ಬಡವರಿಗೆ ಸೂಕ್ತ ಸಮಯದಲ್ಲಿ ವಿತರಿಸುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ಅವರು ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: