ಪ್ರಮುಖ ಸುದ್ದಿ

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ : ಜಿಲ್ಲಾಡಳಿತದ ಮಾತಿಗೆ ಬೆಲೆಯೇ ಇಲ್ಲ

ರಾಜ್ಯ( ಮಡಿಕೇರಿ) ಮಾ.31 :- ಕೊರೋನಾ ಸೋಂಕು ಹರಡದಂತೆ ಲಾಕ್‍ಡೌನ್ ಆದೇಶ ಮಾಡಿರುವ ಜಿಲ್ಲಾಡಳಿತ ಜನರ ಅನುಕೂಲಕ್ಕಾಗಿ ವಾರದ ಮೂರು ದಿನ ಕೊಂಚ ಸಮಯ ಸಡಿಲಿಕೆ ನೀಡಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವ ಬದಲು ಜನರು ಮುಗಿ ಬೀಳುತ್ತಿರುವ ದೃಶ್ಯ ಕಂಡು ಬರುತ್ತಿದ್ದು, ಅಂತರ ಕಾಯ್ದುಕೊಳ್ಳದೇ ಇರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಇಂದು ದಿನಸಿ ಸಾಮಾಗ್ರಿಗಳು ಮತ್ತು ತರಕಾರಿ ಖರೀದಿಸಲು ಜನಜಂಗುಳಿಯೇ ಕಂಡು ಬಂತು. ರಸ್ತೆ ತುಂಬಾ ಕಾರು, ಜೀಪುಗಳು ನಿಲುಗಡೆಗೊಂಡಿದ್ದವು. ದಿನಸಿ ಅಂಗಡಿಗಳ ಎದುರು ಜನಸಂದಣಿ ಕಂಡು ಬಂದಾಗ ಪೊಲೀಸರು ಮಧ್ಯ ಪ್ರವೇಶಿಸಿ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಪೊಲೀಸರ ಮಾತು ಮೀರಿ ಮುಗಿಬೀಳುತ್ತಿದ್ದ ಜನರ ಮನವೊಲಿಸುವ ಕಾರ್ಯವನ್ನು ವರ್ತಕರು ಮಾಡಿದರು. ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ತರಕಾರಿ ಮಾರುಕಟ್ಟೆಯಾಗಿ ಮಾರ್ಪಟ್ಟಿತ್ತು. ನಾಪೋಕ್ಲು, ಸಿದ್ದಾಪುರ, ಗೋಣಿಕೊಪ್ಪ, ವಿರಾಜಪೇಟೆ, ಸೋಮವಾರಪೇಟೆಯಲ್ಲೂ ಜನಸಂದಣಿ ಕಂಡು ಬಂತು.
ಕೊರೋನಾ ಸೋಂಕು ಹರಡುವುದನ್ನು ತಡೆಯಲು ಜನರು ಸರ್ಕಾರದ ನಿಯಮವನ್ನು ಪಾಲಿಸಲೇಬೇಕು ಎಂದು ಜಿಲ್ಲಾಡಳಿತ ಎಷ್ಟೇ ಮನವಿ ಮಾಡಿಕೊಂಡರು ಅದಕ್ಕೆ ಬೆಲೆಯೇ ಸಿಗಲಿಲ್ಲ. ಜನರು ಮಾತ್ರ ದಿನಸಿ ಮತ್ತು ತರಕಾರಿ ಮುಗಿದು ಬಿಡುತ್ತದೆ ಎನ್ನುವ ಆತಂಕದೊಂದಿಗೆ ಸಹನೆ ಕಳೆದುಕೊಂಡು ಖರೀದಿಗೆ ಮುಂದಾಗುತ್ತಿದ್ದ ದೃಶ್ಯ ಕಂಡು ಬಂತು. ಜನರು ರಸ್ತೆಗಿಳಿಯುವುದನ್ನು ತಡೆಯಲು ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯಾಗಬೇಕೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ ಸೀಮಿತ ಸಮಯದಲ್ಲಿ ಲಾಕ್‍ಡೌನ್ ಆದೇಶವನ್ನು ಸಡಿಲಿಸಿದರೂ ಗ್ರಾಮೀಣ ಭಾಗದ ಜನರಿಗೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ನಗರ ಮತ್ತು ಪಟ್ಟಣದ ಜನ ಮಾತ್ರ ತಮಗೆ ಬೇಕಾದ ವಸ್ತುಗಳನ್ನು ಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಉತ್ತರ ಕೊಡಗಿನ ಪುಷ್ಪಗಿರಿ ತಪ್ಪಲಿನಲ್ಲಿರುವ ಕುಗ್ರಾಮಗಳಾದ ಗರ್ವಾಲೆ, ಸೂರ್ಲಬ್ಬಿ, ಕುಂಬಾರಗಡಿಗೆ, ಮಂಕ್ಯಾ, ಕಿಕ್ಕರಳ್ಳಿ, ಹಮ್ಮೀಯಾಲ, ಮುಟ್ಲು, ಶೀರಂಗಳ್ಳಿ, ಕಿರಂಗದೂರು, ಹರಗ, ಬೇಟ್ಟದಳ್ಳಿ, ಕೂತಿ, ಶಾಂತಳ್ಳಿ, ತಾಕೇರಿ, ಕುಡಿಗಾಣ, ಕೊತ್ನಳ್ಳಿ ಹಾಗು ಬೀದಳ್ಳಿ ಭಾಗದಲ್ಲಿರುವ ರೈತಾಪಿ ವರ್ಗದ ಜನತೆ ಸಂಪೂರ್ಣ ಸಂಕಷ್ಟದಲ್ಲಿ ಸಿಲುಕಿದ್ದಾರೆ. ದಿನಪಯೋಗಿ ಸಾಮಾಗ್ರಿಗಳಾದ ಅಡುಗೆ ಎಣ್ಣೆ, ತರಕಾರಿ, ಸಾಂಬಾರ ಪದಾರ್ಥಗಳು ಸಿಗದೆ ಅತಂತ್ರರಾಗಿದ್ದಾರೆ.
ಸಾರಿಗೆ ವ್ಯವಸ್ಥೆ ಇಲ್ಲದೆ ಜಿಲ್ಲಾಡಳಿತ ನೀಡಿರುವ ಸಮಯಕ್ಕೆ ಪಟ್ಟಣಕ್ಕೆ ತೆರಳಲು ಸಾಧ್ಯವಾಗದೇ ಜನರು ಪರದಾಡುತ್ತಿದ್ದಾರೆ. ಜಿಲ್ಲಾಡಳಿತ ಗ್ರಾಮೀಣ ಭಾಗದ ಜನರ ಬಗ್ಗೆ ಕಾಳಜಿ ತೋರಬೇಕೆಂದು ಗ್ರಾಮದ ಪ್ರಮುಖರು ಒತ್ತಾಯಿಸಿದ್ದಾರೆ.
ಸರ್ಕಾರ ಏ.14 ರವರೆಗೆ ಲಾಕ್‍ಡೌನ್ ಆದೇಶವನ್ನು ಜಾರಿಗೆ ತಂದಿದ್ದರೂ ಈ ಪರಿಸ್ಥಿತಿ ಮುಂದುವರಿಯಬಹುದು ಎನ್ನುವ ಆತಂಕದಲ್ಲಿ ಜನ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಧಾನ್ಯಗಳನ್ನು ಖರೀದಿಸಿ ಸಂಗ್ರಹಿಸಲು ಆರಂಭಿಸಿದ್ದಾರೆ. ಹಣ ಇರುವವರು ಮಿತಿ ಮೀರಿ ವಸ್ತುಗಳನ್ನು ಖರೀದಿಸುವುದರಿಂದ ಬಡವರ್ಗ ಹಾಗೂ ಕಾರ್ಮಿಕ ವರ್ಗ ಮುಂದಿನ ದಿನಗಳಲ್ಲಿ ದಿನಸಿ ವಸ್ತುಗಳ ಕೊರತೆಯನ್ನು ಎದುರಿಸುವ ಸಾಧ್ಯತೆಗಳಿದೆ. ಆದ್ದರಿಂದ ಅಧಿಕ ಆಹಾರ ಧಾನ್ಯಗಳ ಖರೀದಿಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕಾಗಿದೆ ಎನ್ನುವ ಒತ್ತಾಯವೂ ಕೇಳಿ ಬಂದಿದೆ.
ಇದೇ ಏ.1 ರಿಂದ ಬಿಪಿಎಲ್ ಕಾರ್ಡುದಾರರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಸೇರಿದಂತೆ ಇತರ ಪಡಿತರವನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ಎಪಿಎಲ್ ಕಾರ್ಡು ಹೊಂದಿರುವವರು ಕೂಡ ಹಸಿವಿನಿಂದ ಬಳಲುವ ಸ್ಥಿತಿ ಎದುರಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಪಿಎಲ್ ಕಾರ್ಡುದಾರರಿಗೂ ಬಿಪಿಎಲ್ ಗೆ ನೀಡುವಷ್ಟೇ ಪ್ರಮಾಣದ ದಿನಸಿಯನ್ನು ನೀಡಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಒತ್ತಾಯಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: