ಮೈಸೂರು

ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ ಶಾಸಕ ಎಲ್.ನಾಗೇಂದ್ರ

ಮೈಸೂರು,ಮಾ.31:-  ಮೈಸೂರು ಮಹಾನಗರಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ  ಶಾಸಕ  ಎಲ್.ನಾಗೇಂದ್ರ ಅವರ ಅಧ್ಯಕ್ಷತೆಯಲ್ಲಿ ವಿಶ್ವದಾದ್ಯಂತ ಹರಡುತ್ತಿರುವ ಕೋವಿಡ್-19 [ಕೊರೋನಾ] ರೋಗದ ನಿಯಂತ್ರಣಕ್ಕಾಗಿ ಚಾಮರಾಜ ವಿಧಾನ ಸಭಾ ಕ್ಷೇತ್ರದಲ್ಲಿ ಹಾಗೂ ಮೈಸೂರು ನಗರದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಸಾರ್ವಜನಿಕರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳು, ಪರಿಹಾರೋಪಾಯಗಳು, ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಹಿಸಬೇಕಾದ ಕ್ರಮಗಳು, ಶುಚಿತ್ವ ಕಾಪಾಡುವುದು, ಕೂಲಿಕಾರ್ಮಿಕರಿಗೆ ದಿನನಿತ್ಯದ ಬದುಕಿಗಾಗಿ ಆಹಾರ ಧಾನ್ಯಗಳ ಪೂರೈಕೆ ಮುಂತಾದ ವಿಷಯಗಳ ಕುರಿತಂತೆ ಚರ್ಚಿಸಿದರು.

ಚರ್ಚೆಯ ಸಮಯದಲ್ಲಿ ಈಗಾಗಲೇ ತೆರೆದಿರುವ ಸಾಂತ್ವನ ಕೇಂದ್ರಗಳಲ್ಲಿರುವ, ವಸತಿ ರಹಿತರ, ನಿರ್ಗತಿಕರ, ಕೂಲಿ ಕಾರ್ಮಿಕರ, ಭಿಕ್ಷುಕರ  ಆರೋಗ್ಯ ತಪಾಸಣೆ, ಅವರ ಆರೋಗ್ಯದ ಕುರಿತಂತೆ ನಿಗಾವಹಿಸುವುದು, ಅಲ್ಲಿ ತಂಗಲು ಹೆಚ್ಚು ಜನ ಸಂಖ್ಯೆಯ  ಒತ್ತಡ ಉಂಟಾಗದಂತೆ  ಕ್ರಮವಹಿಸಬೇಕು, ಇನ್ನೂ ಹೆಚ್ಚಿನ ಬಡಾವಣೆಗಳಲ್ಲಿ ವಸತಿ ಹೀನ ನಿರ್ಗತಿಕರಿದ್ದು ಅಂತಹ ಬಡಾವಣೆಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸಲು ಕ್ರಮವಹಿಸಬೇಕೆಂದರು.

ಕ್ಷೇತ್ರದ ಹಾಗೂ ನಗರದ ಹಲವಾರು ಕಡೆಗಳಲ್ಲಿ ಪಡಿತರ ಚೀಟಿಗಳ ನವೀಕರಣದ ತೊಂದರೆಯಿರುವುದಾಗಿ ಪಡಿತರ ನೀಡಲು ನಿರಾಕರಿಸಿರುವ ಪ್ರಕರಣಗಳನ್ನು ಈ ಸಂದರ್ಭದಲ್ಲಿ ಪರಿಗಣಿಸದೆ ಪಡಿತರ ಚೀಟಿ ಹೊಂದಿರುವ ಎಲ್ಲಾ ಬಿ.ಪಿ.ಎಲ್/ಎ.ಪಿ.ಎಲ್ ಪಡಿತರದಾರರಿಗೆ ಸರ್ಕಾರದ ನಿಯಮಾವಳಿಯಂತೆ ಅವರಿಗೆ ದೊರೆಕಬೇಕಾದ ಪಡಿತರವನ್ನು ತಪ್ಪದೇ ಕೊಡಿಸಲು ಎಲ್ಲಾ ವಲಯ ಸಹಾಯಕ ಕಮೀಷನರ್ ಗಳು ಜಾಗ್ರತೆ ವಹಿಸುವಂತೆ ಶಾಸಕರು ಸೂಚಿಸಿದರು.

ಕ್ರಿಮಿನಾಶಕ ಸಿಂಪಡಣೆ ಕಾರ್ಯವನ್ನು ಎಲ್ಲಾ ವಾರ್ಡ್ ಗಳಲ್ಲಿಯೂ ಕ್ರಮಬದ್ದವಾಗಿ ನಿರ್ವಹಿಸುವಂತೆ, ಮನೆ ಬಾಗಿಲಿಗೆ ತರಕಾರಿ/ಹಣ್ಣು ದೊರೆಯುವಂತೆ ಸೂಕ್ತ ವ್ಯವಸ್ಥೆ ಮಾಡುವಂತೆ, ಸಾಂತ್ವನ ಕೇಂದ್ರಗಳಲ್ಲಿರುವವರಿಗೆ ಉತ್ತಮ ಆಹಾರ ಸರಬರಾಜಿಗೆ ಕ್ರಮವಹಿಸುವಂತೆ, ಹೋಮ್ ಕ್ವಾರಂಟೈನ್ ನಲ್ಲಿರುವವರು ಹೊರಗೆ ಬಾರದಂತೆ ಈ ಕುರಿತು ನಿಗಾವಹಿಸಲು ಅಗತ್ಯ ಸಿಬ್ಬಂದಿ ನಿಯೋಜಿಸುವಂತೆ ಹೀಗೆ ಹತ್ತು ಹಲವು ಸೂಚನೆಗಳನ್ನು ನೀಡಿದರು.

ಮಹಾನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ ಕೈಗೊಂಡಿರುವ ಕ್ರಮಗಳ ಕುರಿತಾದ ಸವಿಸ್ತಾರ ವಿವರಗಳನ್ನು ನೀಡಿದರು.

ಈ ಸಂದರ್ಭದಲ್ಲಿ    ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತರಾದ   ಶಶಿಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ  ಸುಬ್ಬಯ್ಯ , ಆರೋಗ್ಯ ಅಧಿಕಾರಿಗಳಾದ ಡಾ. ಜಯಂತ್  , ವಲಯ ಕಚೇರಿಗಳ ಸಹಾಯಕ ಆಯುಕ್ತರುಗಳು, ಅಭಿವೃದ್ದಿ ಅಧಿಕಾರಿಗಳು, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: