ಪ್ರಮುಖ ಸುದ್ದಿ

ಸಹಕಾರ ಸಂಘಗಳ ಮೂಲಕ ದಿನಸಿ ಸಾಮಾಗ್ರಿ ವಿತರಿಸಲು ಮನವಿ

ರಾಜ್ಯ( ಮಡಿಕೇರಿ) ಏ.1 :- ಜಿಲ್ಲೆಯ ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತ ವಾರದ ಮೂರು ದಿನ ಲಾಕ್‍ಡೌನ್ ಆದೇಶವನ್ನು ಸಡಿಲಿಸಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದೆ. ಆದರೆ ಈ ಕ್ರಮದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬದಲು ಜನಜಂಗುಳಿ ಹೆಚ್ಚಾಗುತ್ತಿರುವುದರಿಂದ ಮತ್ತು ದುಬಾರಿ ದರ ಸೃಷ್ಟಿಯಾಗುತ್ತಿರುವುದರಿಂದ ದಿನಸಿ ಸಾಮಾಗ್ರಿಗಳನ್ನು ಸಹಕಾರ ಸಂಘಗಳ ಮೂಲಕ ಮಾರಾಟಕ್ಕೆ ವ್ಯವಸ್ಥೆ ಮಾಡುವುದು ಸೂಕ್ತವೆಂದು ಕೊಡಗು ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಗಣೇಶ್ ಅಭಿಪ್ರಾಯಪಟ್ಟಿದ್ದಾರೆ
ಮಾಧ್ಯಮ ಪ್ರಕಟಣೆ ನೀಡಿರುವ ಅವರು ಅಗತ್ಯ ವಸ್ತುಗಳನ್ನು ಕೊಳ್ಳಲು ಜನರು ಮುಗಿ ಬೀಳುವುದರಿಂದ ಸರ್ಕಾರದ ಲಾಕ್‍ಡೌನ್ ಉದ್ದೇಶವೇ ವಿಫಲವಾದಂತ್ತಾಗುತ್ತಿದೆ. ಜನಜಂಗುಳಿಯನ್ನು ತಪ್ಪಿಸಲು ಮತ್ತು ದುಬಾರಿ ದರದ ಹಾವಳಿಯಿಂದ ಮುಕ್ತಿ ನೀಡಲು ಜಿಲ್ಲೆಯಾದ್ಯಂತ ಇರುವ ಸಹಕಾರ ಸಂಘಗಳ ಮೂಲಕವೇ ದಿನಸಿ ಸಾಮಾಗ್ರಿಗಳನ್ನು ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ದಿನಸಿ ಸಾಮಾಗ್ರಿ ಹಾಗೂ ತರಕಾರಿಯನ್ನು ಸರ್ಕಾರವೇ ಖರೀದಿಸಿ ನ್ಯಾಯಯುತವಾದ ಬೆಲೆಯಲ್ಲಿ ಜನರಿಗೆ ವಿತರಿಸಲು ಸಹಕಾರ ಸಂಘಗಳಿಗೆ ಜವಾಬ್ದಾರಿಯನ್ನು ನೀಡುವುದರಿಂದ ದಲ್ಲಾಳಿಗಳು ಮತ್ತು ಬೆಲೆ ಏರಿಕೆಯ ಹಾವಳಿಯೂ ತಪ್ಪಿದಂತ್ತಾಗುತ್ತದೆ. ಗ್ರಾಮೀಣ ಭಾಗಗಳ ಸಮೀಪದಲ್ಲೇ ಸಹಕಾರ ಸಂಘಗಳು ಇರುವುದರಿಂದ ದಿನಸಿ ವಸ್ತುಗಳಿಂದ ಗ್ರಾಮಸ್ಥರು ವಂಚಿತರಾಗುವುದು ತಪ್ಪುತ್ತದೆ. ಅಲ್ಲದೆ ಜನದಟ್ಟಣೆಯೂ ಕಡಿಮೆಯಾಗುತ್ತದೆ ಮತ್ತು ಆದಾಯವೂ ಸರ್ಕಾರದ ಬೊಕ್ಕಸ ಸೇರುತ್ತದೆ ಎಂದು ಗಣೇಶ್ ಸಲಹೆ ನೀಡಿದ್ದಾರೆ. ಜನಸಂದಣಿ ಹೆಚ್ಚಾಗುತ್ತಿರುವುದರಿಂದ ದಿನಸಿ ಕಿಟ್‍ಗಳನ್ನು ಬಡವರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವುದು ಸೂಕ್ತ ಕ್ರಮವಾಗಿದೆ. ಈ ವಿಚಾರದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಎಂದು ಪ್ರತ್ಯೇಕವಾಗಿ ಪರಿಗಣಿಸದೆ ಕೇರಳ ಸರ್ಕಾರದ ಮಾದರಿಯಲ್ಲಿ ಎಲ್ಲರಿಗೂ ಸಮಾನ ಪ್ರಮಾಣದ ದಿನಸಿ ಸಾಮಾಗ್ರಿಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ ಸೀಮಿತ ಸಮಯದಲ್ಲಿ ಲಾಕ್‍ಡೌನ್ ಆದೇಶವನ್ನು ಸಡಿಲಿಸಿದರೂ ಗ್ರಾಮೀಣ ಭಾಗದ ಜನರಿಗೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ನಗರ ಮತ್ತು ಪಟ್ಟಣದ ಜನ ಮಾತ್ರ ತಮಗೆ ಬೇಕಾದ ವಸ್ತುಗಳನ್ನು ಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಸರ್ಕಾರ ಏ.14 ರವರೆಗೆ ಲಾಕ್‍ಡೌನ್ ಆದೇಶವನ್ನು ಜಾರಿಗೆ ತಂದಿದ್ದರೂ ಈ ಪರಿಸ್ಥಿತಿ ಮುಂದುವರಿಯಬಹುದು ಎನ್ನುವ ಆತಂಕದಲ್ಲಿ ಜನ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಧಾನ್ಯಗಳನ್ನು ಖರೀದಿಸಿ ಸಂಗ್ರಹಿಸಲು ಆರಂಭಿಸಿದ್ದಾರೆ. ಹಣ ಇರುವವರು ಮಿತಿ ಮೀರಿ ವಸ್ತುಗಳನ್ನು ಖರೀದಿಸುವುದರಿಂದ ಬಡವರ್ಗ ಹಾಗೂ ಕಾರ್ಮಿಕ ವರ್ಗ ಮುಂದಿನ ದಿನಗಳಲ್ಲಿ ದಿನಸಿ ವಸ್ತುಗಳ ಕೊರತೆಯನ್ನು ಎದುರಿಸುವ ಸಾಧ್ಯತೆಗಳಿದೆ. ಆದ್ದರಿಂದ ಅಧಿಕ ಆಹಾರ ಧಾನ್ಯಗಳ ಖರೀದಿಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕಾಗಿದೆ ಎಂದು ಹೇಳಿದ್ದಾರೆ.
ಇದೇ ಏ.1 ರಿಂದ ಬಿಪಿಎಲ್ ಕಾರ್ಡುದಾರರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಸೇರಿದಂತೆ ಇತರ ಪಡಿತರವನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ಎಪಿಎಲ್ ಕಾರ್ಡು ಹೊಂದಿರುವವರು ಕೂಡ ಹಸಿವಿನಿಂದ ಬಳಲುವ ಸ್ಥಿತಿ ಎದುರಾಗಿದೆ. ದಿನಸಿ ಕೊಳ್ಳಲು ತಾಳಿಯನ್ನು ಅಡವಿಡುವಂತಹ ಪರಿಸ್ಥಿತಿ ಬಂದೊದಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಪಿಎಲ್ ಕಾರ್ಡುದಾರರಿಗೂ ಬಿಪಿಎಲ್ ಗೆ ನೀಡುವಷ್ಟೇ ಪ್ರಮಾಣದ ದಿನಸಿಯನ್ನು ನೀಡಬೇಕೆಂದು ಗಣೇಶ್ ಒತ್ತಾಯಿಸಿದ್ದಾರೆ.
ದರ ನಿಗಧಿಯ ವಿಚಾರವನ್ನು ಆಯಾ ವಸ್ತುಗಳನ್ನು ಮಾರಾಟ ಮಾಡುವವರ ಬಳಿ ಜಿಲ್ಲಾಡಳಿತ ಚರ್ಚಿಸುವುದು ಸೂಕ್ತ. ಚೇಂಬರ್ ಆಫ್ ಕಾಮರ್ಸ್‍ನ ಸಲಹೆಯಿಂದ ಸಮಸ್ಯೆಗೆ ಪರಿಹಾರ ದೊರೆಯಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
ಸಹಕಾರ ಸಂಘಗಳ ಮೂಲಕ ಸರ್ಕಾರವೇ ದಿನಸಿ ಸಾಮಾಗ್ರಿಗಳನ್ನು ಮಾರಾಟ ಮಾಡಿದರೆ ದರ ಏರಿಕೆಯ ಹಗಲು ದರೋಡೆಗೆ ಕಡಿವಾಣ ಬಿದ್ದಂತ್ತಾಗುತ್ತದೆ ಎಂದು ಹೇಳಿದ್ದಾರೆ.
ಬಡವರು ಹಾಗೂ ಕಾರ್ಮಿಕ ವರ್ಗಕ್ಕೆ ಉಚಿತವಾಗಿ ದಿನಸಿ ಸಾಮಾಗ್ರಿಗಳನ್ನು ವಿತರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ರಸ್ತೆ, ಚರಂಡಿ, ತಡೆಗೋಡೆ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ಕೋಟ್ಯಾಂತರ ಹಣವನ್ನು ಬಳಸಿಕೊಳ್ಳಬೇಕು. ಜನರಲ್ಲಿ ಆತಂಕವನ್ನು ಸೃಷ್ಟಿಸಿರುವ ಕೊರೋನಾ ಸೋಂಕು ನಾಶವಾಗುವಲ್ಲಿಯವರೆಗೆ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿ ಅದೇ ಹಣದಿಂದ ಬಡವರ ಹಸಿವನ್ನು ನೀಗಿಸುವ ಯೋಜನೆ ರೂಪಿಸಬೇಕೆಂದು ಗಣೇಶ್ ಒತ್ತಾಯಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: