ದೇಶಪ್ರಮುಖ ಸುದ್ದಿ

ರಾಷ್ಟ್ರಪತಿ ಹುದ್ದೆಗೆ ಆಡ್ವಾಣಿ ಹೆಸರು ಸೂಚಿಸಿದ ಮೋದಿ ; ಬಿಜೆಪಿ ಅಭ್ಯರ್ಥಿ ಗೆಲುವು ಈಗ ಸುಲಭ

ನವದೆಹಲಿ : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರ ಅವಧಿ ಮುಂದಿನ ಜುಲೈನಲ್ಲಿ ಮುಗಿಯಲಿದ್ದು, ಮುಂದಿನ ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

ಗುಜರಾತಿನ ಸೋಮನಾಥದಲ್ಲಿ ನಡೆದ ಬಿಜೆಪಿ ವರಿಷ್ಠರ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಖುದ್ದಾಗಿ ಆಡ್ವಾಣಿ ಅವರ ಹೆಸರನ್ನು ಪ್ರಸ್ತಾವಿಸಿದ್ದಾರೆ ಎನ್ನಲಾಗಿದೆ. ವರಿಷ್ಠರ ಸಭೆಯಲ್ಲಿ ಅಮಿತ್ ಶಾ, ಕೇಶುಭಾಯಿ ಪಟೇಲ್ ಮತ್ತು ಎಲ್.ಕೆ. ಆಡ್ವಾಣಿ ಅವರೂ ಉಪಸ್ಥಿತರಿದ್ದರು. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಬಿಜೆಪಿಗೆ ಇದೀಗ ತನ್ನ ಅಭ್ಯರ್ಥಿಯನ್ನು ಮುಂದಿನ ರಾಷ್ಟ್ರಪತಿಯನ್ನಾಗಿ ಮಾಡುವುದು ಸುಲಭವಾಗಿದೆ.

ರಾಷ್ಟ್ರಪತಿ ಚುನಾವಣೆಲ್ಲಿ ಬಹುಮತ ಸಾಧಿಸಲು ಬೇಕಾದ ಸಂಪೂರ್ಣ ಬಲ ಬಿಜೆಪಿ ಬಳಿ ಇಲ್ಲದಿದ್ದರೂ, ಬಹುತಮಕ್ಕೆ ಹತ್ತಿರವಾಗುವಷ್ಟು ಮತಗಳು ಬಿಜೆಪಿ ಬಳಿ ಇವೆ. ಎನ್‍ಡಿಎ ಭಾಗವಲ್ಲದ ತಮಿಳುನಾಡಿನ ಎಐಎಡಿಎಂಕೆ ಮತ್ತು ಒಡಿಶಾದ ಬಿಜುಜನತಾದಳದ ನೆರವು ಪಡೆದರೆ ಗೆಲುವು ಸುಲಭವಾಗಲಿದೆ ಎನ್ನವುದು ಸದ್ಯದ ಲೆಕ್ಕಾಚಾರ.

ಉತ್ತರ ಪ್ರದೇಶದ ಬಲ :

ರಾಷ್ಟ್ರಪತಿ ಆಯ್ಕೆಗೆ ಅಗತ್ಯವಿರುವ ಸರಳ ಬಹುಮತಕ್ಕಿಂತ ಬಿಜೆಪಿ 17,500 ಎಲೆಕ್ಟೋರಲ್ ಮತಗಳ ಕೊರತೆ ಇದೆ. ಲೋಕಸಭೆಯಲ್ಲಿ 281 ಬಿಜೆಪಿ ಸಂಸದರಿದ್ದಾರೆ. 29 ರಾಜ್ಯಗಳ ಮತ್ತು ಅರೆರಾಜ್ಯ ಸ್ಥಾನಮಾನವಿರುವ ದೆಹಲಿ, ಪುದುಚೆರಿ ವಿಧಾನಸಭೆ ಸದಸ್ಯರು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯ ಮತದಾರರು.

ಮಹಾರಾಷ್ಟ್ರ, ಗುಜರಾತ್, ಹರಿಯಾಣ, ಛತ್ತೀಸಗಡ, ಜಾರ್ಖಂಡ್‌, ಮಧ್ಯಪ್ರದೇಶ, ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಹಾಗೂ ಆಂಧ್ರಪ್ರದೇಶದಲ್ಲಿ ಟಿಡಿಪಿ ಜತೆ ಸೇರಿ ಸರ್ಕಾರ ರಚಿಸಿದೆ. ಈಗ ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅಧಿಕಾರ ಹಿಡಿಯಲಿರುವುದರಿಂದ ರಾಷ್ಟ್ರಪತಿ ಹುದ್ದೆಗೆ ಪಕ್ಷ ಬಯಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಸುಲಭವಾಗಲಿದೆ.

ದೇಶದ ವಿಧಾನಸಭೆಗಳ ಪೈಕಿ ಉತ್ತರಪ್ರದೇಶ ವಿಧಾನಸಭೆಯಲ್ಲಿ ಅತಿ ಹೆಚ್ಚು ಶಾಸಕರು ಇರುವುದರಿಂದ ರಾಷ್ಟ್ರಪತಿ ಚುನಾವಣೆ ಸಂದರ್ಭ ಈ ರಾಜ್ಯಗಳ ಶಾಸಕರು ನಿರ್ಣಾಯಕ ಪಾತ್ರವಹಿಸುತ್ತಾರೆ. ಬಿಜೆಪಿಗೆ ಇಲ್ಲಿ ಭಾರಿ ಬಹುಮತ ದೊರಕಿರುವುದು ರಾಷ್ಟ್ರಪತಿ ಆಯ್ಕೆಯನ್ನು ಸುಲಭಗೊಳಿಸಿದೆ. ಬಿಜೆಪಿಯು ರಾಷ್ಟ್ರಪತಿ ಹುದ್ದೆಗೆ ಪಕ್ಷದ ಅಭ್ಯರ್ಥಿಯನ್ನು ಪರಿಗಣಿಸಿ, ಮಿತ್ರ ಪಕ್ಷಗಳು ಬಯಸಿದ ಅಭ್ಯರ್ಥಿಯನ್ನು ಉಪ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ.

(ಎನ್‍ಬಿಎನ್‍)

Leave a Reply

comments

Related Articles

error: