ಪ್ರಮುಖ ಸುದ್ದಿ

 ಕೊರೋನಾ ವೈರಸ್ ಗೆ ದೇಶದಲ್ಲಿ ಮತ್ತೆ ಮೂವರು ಬಲಿ :  ಸೋಂಕಿತರ ಸಂಖ್ಯೆ 1400ಕ್ಕೆ ಏರಿಕೆ

ದೇಶ(ನವದೆಹಲಿ)ಮಾ.31:-  ಜಗತ್ತನ್ನೇ ತಲ್ಲಣಗೊಳಿಸಿದ  ಮಹಾಮಾರಿ ಕೊರೋನಾ ವೈರಸ್ ದೇಶದಲ್ಲಿ ಮರಣ ಮೃದಂಗ ಬಾರಿಸುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇಂದು ಕೇರಳ, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಮತ್ತೆ ಮೂವರು ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.

ಸೋಂಕಿತರ ಸಂಖ್ಯೆಯೂ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ದೇಶದಲ್ಲಿ ಇದುವರೆಗೆ 1400 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ.

ಕೇರಳದಲ್ಲಿ  68 ವರ್ಷದ ವ್ಯಕ್ತಿಯೊಬ್ಬರು ಕೊರೋನಾಗೆ ಬಲಿಯಾಗಿದ್ದು, ಭಾನುವಾರವಷ್ಟೇ ಇವರಲ್ಲಿ ವೈರಸ್ ದೃಢಪಟ್ಟಿತ್ತು.  ಇವರ ಸಾವಿನಿಂದ ಕೇರಳ ರಾಜ್ಯದಲ್ಲಿ ವೈರಸ್ ನಿಂದ ಸಾವಿಗೀಡಾದವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಪಶ್ಚಿಮ ಬಂಗಾಳದಲ್ಲಿಯೂ ಸೋಮವಾರ ರಾತ್ರಿ ವೈರಸ್ ಪೀಡಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಹೌರಾ ಜಿಲ್ಲೆ ನಿವಾಸಿಯಾಗಿದ್ದ 40 ವರ್ಷದ ಮಹಿಳೆ ವೈರಸ್’ಗೆ ಬಲಿಯಾಗಿದ್ದು, ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಈ ವರೆಗೂ ಸೋಂಕಿಗೆ ಮೂವರು ಬಲಿಯಾಗಿದ್ದಾರೆಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮಧ್ಯಪ್ರದೇಶದಲ್ಲಿಯೂ ವೈರಸ್’ಗೆ ಓರ್ವ ವ್ಯಕ್ತಿ ಇಂದೋರ್ ನಲ್ಲಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಇದರೊಂದಿಗೆ ಮಧ್ಯಪ್ರದೇಶದಲ್ಲಿ ವೈರಸ್’ಗೆ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಅಲ್ಲದೆ, ಸೋಂಕಿತರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: