ಪ್ರಮುಖ ಸುದ್ದಿ

ಕೊರೋನಾ ಸ್ವಯಂ ಸೇವೆ : ಬೂತ್ ಮಟ್ಟದಲ್ಲಿ ಬಿಜೆಪಿ ಕಾರ್ಯಪಡೆ ರಚನೆ

ರಾಜ್ಯ( ಮಡಿಕೇರಿ) ಏ.1:- ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಿಜೆಪಿ ವತಿಯಿಂದ ಪ್ರತೀ ಬೂತ್ ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದೆ ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಸೂಚನೆಯಂತೆ ಪ್ರತಿ ಬೂತ್‍ಗೆ 15 ಜನರ ಕಾರ್ಯಪಡೆಯನ್ನು ರಚಿಸಲಾಗಿದ್ದು, ಪ್ರತೀ ಬೂತ್‍ನಲ್ಲಿ ಕರೋನಾ ವೈರಸ್ ಸೋಂಕು ಬಾರದಂತೆ ತಡೆಯಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ತಂಡು ಕಾರ್ಯನಿರ್ವಹಿಸಲಿದೆ.
ಪ್ರತೀ ಗ್ರಾಮದಲ್ಲಿ ಯಾರಾದರೂ ಅಸಹಾಯಕರು, ವಯೋವೃದ್ಧರು, ನಿರ್ಗತಿಕರು, ರೋಗಿಗಳು, ವಿಕಲಚೇತನರು, ಭಿಕ್ಷುಕರು ಇದ್ದಲ್ಲಿ ಅವರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ದೊರೆಯಬಹುದಾದ ಸೌಕರ್ಯಗಳನ್ನು ಒದಗಿಸಲು ಸಾರ್ವಜನಿಕರು ಹಾಗೂ ಸರ್ಕಾರದ ಮಧ್ಯೆ ಸೇತುವೆಯಾಗಿ ಈ ಕಾರ್ಯಪಡೆ ಕೆಲಸ ಮಾಡಲಿದೆ.
ಈ ತಂಡ ಕೈಗೊಳ್ಳುವ ಯಾವುದೇ ಕಾರ್ಯಗಳು ಸರ್ಕಾರ, ಜಿಲ್ಲಾಡಳಿತದ ಕಾನೂನು, ಕಾಯ್ದೆ ಹಾಗೂ ಸಂದರ್ಭಕ್ಕೆ ತಕ್ಕಂತೆ ಬದಲಾಗುವ ನಿಯಮಗಳಿಗೆ ಒಳಪಟ್ಟಿರುತ್ತದೆ ಎಂದು ಪಕ್ಷದ ಪ್ರಮುಖರು ತಿಳಿಸಿದ್ದಾರೆ.
ಗ್ರಾಮಕ್ಕೆ ಹೊರಗಿನಿಂದ ಯಾರೂ ಬಾರದಂತೆ ನೀಗಾ ವಹಿಸುವುದು, ಇದನ್ನು ಯಾರೇ ಮೀರಿದರೂ ಸರ್ಕಾರದ ಗಮನಕ್ಕೆ ತರುವುದು, ಜನರು ಗುಂಪು ಸೇರದಂತೆ ಹಾಗೂ ಅಂತರ ಕಾಯ್ದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವುದು, ಯಾರಾದರೂ ನಿರ್ಗತಿಕರು, ಭಿಕ್ಷುಕರು, ಅಸಂಘಟಿತ ಕಾರ್ಮಿಕರು, ವಲಸಿಗರು ಇದ್ದಲ್ಲಿ ಅಂತಹವರ ಪಟ್ಟಿ ತಯಾರಿಸಿ, ಅಂತಹವರಿಗೆ ಊಟ, ವಸತಿ ವ್ಯವಸ್ಥೆ ಮಾಡಲು ಪ್ರಯತ್ನಿಸಲಿದೆ. ಸಾಧ್ಯವಾಗದಿದ್ದಲ್ಲಿ ಜಿಲ್ಲಾ ಕಾರ್ಯಪಡೆಯ ಮೂಲಕ ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾಡಳಿತ ಗಮನಕ್ಕೆ ತರಲಾಗುತ್ತದೆ.
ವಯೋವೃದ್ಧರು ಅಸಹಾಯಕರು, ವಿಧವೆಯರು ದೀರ್ಘಕಾಲದಿಂದ ಅನಾರೊಗ್ಯದಿಂದ ಬಳಲುವವರು, ವಿಕಲಚೇತನರು ಇದ್ದಲ್ಲಿ ಅವರ ಪಟ್ಟಿ ತಯಾರಿಸಿ, ಅವರಿಗೆ ಬೇಕಾಗುವ ಔಷಧಿ ನಿತ್ಯೋಪಯೋಗಿ ವಸ್ತುಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಿದೆ. ಕಾರ್ಡ್‍ದಾರರಿಗೆ ಸರ್ಕಾರದಿಂದ ನೀಡುವ ಆಹಾರ ಸಾಮಾಗ್ರಿಗಳು ತಲುಪುವಂತೆ ಅಧಿಕಾರಿಗಳೊಂದಿಗೆ ಸಹಕರಿಸಲಿದೆ.
ಅನೇಕರಿಗೆ ಪಡಿತರ ಚೀಟಿ ಇಲ್ಲದೇ ಇದ್ದವರು ಗಮನಕ್ಕೆ ಬಂದಲ್ಲಿ ಅಂತಹವರ ಪಟ್ಟಿ ತಯಾರಿಸಲಿದೆ. ಬಡವರು ಹಾಗೂ ಮಾಧ್ಯಮ ವರ್ಗದವರಿಗೆ ದಿನಬಳಕೆ ವಸ್ತುಗಳನ್ನು ತಲುಪಿಸಲು ಪ್ರಯತ್ನಿಸಲಿದೆ.
ಸಾಧ್ಯವಾದಷ್ಟು ಜನರು ಗುಂಪು ಗುಂಪಾಗಿ ಹೊರಗೆ ಬಾರದಂತೆ ಮನವೊಲಿಸಿ ಅವರಿಗೆ ಬೇಕಾಗುವ ವಸ್ತುಗಳನ್ನು ಅವರಿಂದ ಹಣ ಪಡೆದು ಸೂಕ್ತ ರೀತಿಯಲ್ಲಿ ತಲುಪಿಸಲು ಕ್ರಮ ವಹಿಸಲಿದೆ.
ರೈತರು ತಾವು ಬೆಳೆದ ಬೆಳೆಗಳನ್ನು ಅಂದರೆ ತರಕಾರಿ, ಹಣ್ಣು ಹಂಪಲು ಇತರ ತೋಟಗಾರಿಕಾ ಬೆಳೆಗಳನ್ನು ಸಾಗಾಟ ವ್ಯವಸ್ಥೆ ಮಾಡಿಸಲಾಗುತ್ತದೆ. ಮಾರುಕಟ್ಟೆ ವ್ಯವಸ್ಥೆ ಸಮಸ್ಯೆ ಇದ್ದಲ್ಲಿ ಸರ್ಕಾರದ ಗಮನಕ್ಕೆ ತರಲಾಗುತ್ತದೆ. ಇನ್ನಿತರ ಯಾವುದೇ ಸಮಸ್ಯೆಗಳು ಇದ್ದಲ್ಲಿ ಶಾಸಕರು, ಸಂಸದರು, ಜಿ.ಪಂ, ತಾ.ಪಂ ಸದಸ್ಯರು, ಪಕ್ಷದ ಪ್ರಮುಖರ ಸಹಕಾರದೊಂದಿಗೆ ಈ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ ಎಂದು ರಾಬಿನ್ ದೇವಯ್ಯ ಮಾಹಿತಿ ನೀಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: