ಮೈಸೂರು

ಸಿಬ್ಬಂದಿ ಆರೋಗ್ಯ ಮತ್ತು ಸುರಕ್ಷತೆಗೆ ಬದ್ಧ : ಜ್ಯುಬಿಲಿಯಂಟ್ ಹೇಳಿಕೆ

ಮೈಸೂರು,ಏ.1:- ನಮ್ಮ ಸಿಬ್ಬಂದಿ ಮತ್ತು ಸುತ್ತಮುತ್ತಲಿನ ಪರಿಸರದ ಆರೋಗ್ಯ & ಸುರಕ್ಷತೆ ನಮಗೆ ಅತ್ಯಂತ ಮುಖ್ಯವಾಗಿದೆ. ನಮ್ಮ ಬಸ್ಸುಗಳ ಶುಚಿತ್ವ ಮತ್ತು ದ್ವಾರಗಳಲ್ಲಿ ಉಷ್ಣಾಂಶ ಪರೀಕ್ಷೆ, ಮತ್ತು ಸರ್ಕಾರ ನೀಡಿರುವ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಮಾರ್ಚ್ 26 ರಂದು ಮೈಸೂರಿನ ನಂಜನಗೂಡಿನಲ್ಲಿರುವ ನಮ್ಮ ಘಟಕದಲ್ಲಿನ ಓರ್ವ ಸಹೋದ್ಯೋಗಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ನಮಗೆ ಮಾಹಿತಿ ನೀಡಿದೆ. ಇದೀಗ ಸಹೋದ್ಯೋಗಿಯು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರು ಗುಣಮುಖರಾಗುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಲೆಂದು ನಾವು ಹಾರೈಸುತ್ತೇವೆ ಮತ್ತು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಎಲ್ಲಾ ರೀತಿಯ ನೆರವನ್ನು ನೀಡಲಿದ್ದೇವೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ..

ಇದಲ್ಲದೇ, ನಮ್ಮ ಘಟಕದ ಇನ್ನೂ ಕೆಲವರಿಗೆ ಪಾಸಿಟಿವ್ ಬಂದಿದೆ ಎಂಬ ಮಾಹಿತಿಯನ್ನು ಪಡೆದಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ನಮ್ಮ ಘಟಕದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಎಲ್ಲಾ ಉದ್ಯೋಗಿಗಳು ಸ್ವಯಂ ಕ್ವಾರಂಟೈನ್ ನಲ್ಲಿದ್ದಾರೆ. ನಮ್ಮ ಎಲ್ಲಾ ಉದ್ಯೋಗಿಗಳಿಗೆ ಈ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ನಾವು ಆನ್ಲೈನ್ ಚಾನೆಲ್ ಅನ್ನು ಆರಂಭ ಮಾಡಿದ್ದೇವೆ. ಇದರ ಮೂಲಕ ಸಿಬ್ಬಂದಿಗೆ ಮಾಹಿತಿಯನ್ನು ರವಾನೆ ಮಾಡಲಾಗುತ್ತಿದೆ. ನಮ್ಮ ಇಡೀ ಘಟಕವನ್ನು ನೈರ್ಮಲ್ಯಗೊಳಿಸಲಾಗಿದೆ. ನಮ್ಮ ಸಿಬ್ಬಂದಿಗೆ ಆಹಾರ ಮತ್ತು ಇತರೆ ಅಗತ್ಯತೆಗಳನ್ನು ಪೂರೈಸಲಾಗುತ್ತಿದೆ. ಇದಲ್ಲದೇ, ಅವರೆಲ್ಲರಿಗೂ ಮಾಸ್ಕ್ ಗಳು, ಸೋಪ್/ಸ್ಯಾನಿಟೈಸರ್ ಸೇರಿದಂತೆ ಇನ್ನಿತರೆ ಉತ್ಪನ್ನಗಳನ್ನು ನೀಡಲಾಗುತ್ತಿದೆ. ಇದರ ಜತೆಗೆ ಘಟಕ ಇರುವ ಸುತ್ತಮುತ್ತಲಿನ ಪ್ರದೇಶದ ಸಮುದಾಯ ಮತ್ತು ಸ್ಥಳೀಯ ಆಡಳಿತದೊಂದಿಗೆ ಸಹಕಾರ ನೀಡಲಾಗುತ್ತಿದೆ. ನಮ್ಮ ಎಲ್ಲಾ ಸಿಬ್ಬಂದಿ , ಸ್ಥಳೀಯ ಸಮುದಾಯ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಆಡಳಿತದ ನೆರವಿನಿಂದ ಈ ಬಿಕ್ಕಟ್ಟಿನಿಂದ ಶೀಘ್ರ ಹೊರಬರುತ್ತೇವೆ ಎಂಬ ಭರವಸೆ ನಮಗಿದೆ ಎಂದು ತಿಳಿಸಿದೆ. (ಕೆ.ಎಸ್,ಎಸ್,ಎಚ್)

Leave a Reply

comments

Related Articles

error: