ಪ್ರಮುಖ ಸುದ್ದಿಮೈಸೂರು

ಕ್ವಾರೆಂಟೈನ್‌ನಲ್ಲಿರುವವರು ಹೊರಗಡೆ ಬರದಂತೆ ಎಚ್ಚರವಹಿಸಿ : ಸಚಿವ  ವಿ.ಸೋಮಣ್ಣ ಎಚ್ಚರಿಕೆ

ಮೈಸೂರು,ಏ.1:- ಲಾಕ್‌ಡೌನ್ ಹಿನ್ನೆಲೆಯಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು. ಅಗತ್ಯವಿರುವ ಎಲ್ಲರಿಗೂ ನಂಜನಗೂಡು ತಾಲೂಕು ಆಡಳಿತದ ವತಿಯಿಂದ ಊಟೋಪಚಾರದ ವ್ಯವಸ್ಥೆಯಾಗಬೇಕು ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದರು

ನಂಜನಗೂಡಿನ ಕಾರ್ಖಾನೆಯೊಂದರಲ್ಲೇ ಹೆಚ್ಚಿನ ಕೋವಿಡ್-19 ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಕಾರ್ಖಾನೆ ಆವರಣ ಹಾಗೂ ನಂಜನಗೂಡಿನ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವಲೋಕಿಸಿ ಕಡಕೊಳದಲ್ಲಿರುವ ಕೆ.ಇ.ಬಿ ಇಂಜಿನಿಯರ್ಸ್  ಸಭಾಂಗಣದಲ್ಲಿ ಅವರು ಅಧಿಕಾರಿಗಳ ಸಭೆ ನಡೆಸಿದರು.

ಇದೊಂದು ರಾಷ್ಟ್ರೀಯ ವಿಕೋಪ. ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸಮಾಡಬೇಕು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಕ್ವಾರೆಂಟೈನ್‌ನಲ್ಲಿರುವವರು ಹೊರಗಡೆ ಬರದಂತೆ ಎಚ್ಚರವಹಿಸಬೇಕೆಂದು ತಿಳಿಸಿದರು.

ಕ್ವಾರೆಂಟೈನ್‌ನಲ್ಲಿರುವವರ ಮನೆಗಳಿಗೆ ಪೊಲೀಸರು ಪ್ರತಿದಿನ ಹೋಗಿ ಬರುತ್ತಾರೆ. ಅವರೊಟ್ಟಿಗೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಸಹ ಹೋಗಿ ಬರಬೇಕು. ನರ್ಸ್ ಗಳನ್ನು ಈ ಕೆಲಸಕ್ಕೆ ನಿಯೋಜಿಸಬಾರದು. ನರ್ಸ್ ಗಳನ್ನು ಆಸ್ಪತ್ರೆ ಕೆಲಸಗಳಿಗೆ ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕಾರ್ಖಾನೆಯ 1,458 ನೌಕರರನ್ನು ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ. ಈ ಪೈಕಿ 761 ನಂಜನಗೂಡಿನವರು, 697 ನೌಕರರು ಇತರೆ ತಾಲೂಕಿನವರು ಎಂದು ತಹಶೀಲ್ದಾರ್ ಮಹೇಶ್ ಮಾಹಿತಿ ನೀಡಿದರು.

ನಂಜನಗೂಡು ಹಾಗೂ ಸುತ್ತಮುತ್ತ ಸ್ಯಾನಿಟೈಜರ್, ಸ್ಪ್ರೇ ಮಾಡಲಾಗಿದೆ. ಕೆಲವರನ್ನು ಖಾಸಗಿ ಹೋಟೆಲ್‌ಗಳಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ಅವರಿಗೆ ಅಗತ್ಯವಿರುವ ಪರಿಕರಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಹೋಮ್ ಕ್ವಾರೆಂಟೈನ್‌ನಲ್ಲಿರುವ ಯಾರೊಬ್ಬರು ಹೊರಗೆ ಬಾರದಂತೆ ಪೊಲೀಸರು ಖಾತರಿ ಪಡಿಸಿಕೊಳ್ಳುತ್ತಾರೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದರು.

ಸಭೆಯಲ್ಲಿ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಹರ್ಷವರ್ಧನ್, ಜಿಲ್ಲಾ ಪಂಚಾಯಿತಿ ಸಿ.ಇ.ಒ ಪ್ರಶಾಂತ್ ಕುಮಾರ್ ಮಿಶ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: