ಪ್ರಮುಖ ಸುದ್ದಿ

ಮದ್ಯ ಮತ್ತು ಮಾಂಸ ಮಾರಾಟಕ್ಕೆ ಅವಕಾಶ ನೀಡಲು ಜೆಡಿಎಸ್ ಮನವಿ

ರಾಜ್ಯ( ಮಡಿಕೇರಿ) ಏ.2 :- ವಿಶಿಷ್ಟ ಆಚಾರ, ವಿಚಾರ ಮತ್ತು ವಿಶೇಷ ಖಾದ್ಯ ಬಳಕೆಯನ್ನು ಹೊಂದಿರುವ ಕೊಡಗು
ಜಿಲ್ಲೆಯಲ್ಲಿ ಮಾಂಸಹಾರಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮತ್ತು ಬೆಟ್ಟಗುಡ್ಡ ಪ್ರದೇಶವಾಗಿರುವ ಇಲ್ಲಿಗೆ ಮಾಂಸ ಸೇವನಾ ಕ್ರಮ ಪೂರಕವಾಗಿರುವುದರಿಂದ ಜಿಲ್ಲಾಡಳಿತ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮನವಿ ಮಾಡಿದ್ದಾರೆ.
ಮಾಧ್ಯಮ ಪ್ರಕಟಣೆ ನೀಡಿರುವ ಅವರು ಶಿಸ್ತಿಗೆ ಹೆಸರುವಾಸಿಯಾಗಿರುವ ಕೊಡಗಿನಲ್ಲಿ ಮಾಂಸದೊಂದಿಗೆ ಮದ್ಯ ಮಾರಾಟಕ್ಕೂ ಅವಕಾಶ ಕಲ್ಪಿಸಿದಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಹವಾಗುಣಕ್ಕೆ ಪೂರಕವಾಗಿ ಮದ್ಯ ಪೂರೈಸಬೇಕೆನ್ನುವ ಬೇಡಿಕೆ ಕೇಳಿ ಬಂದಿರುವುದರಿಂದ ಇದರ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ವಾರದಲ್ಲಿ ಮೂರು ದಿನವಾದರೂ ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಂಗಳವಾರ ನಡೆದ ಸಭೆಯಲ್ಲಿ ಮಾಂಸ ಮಾರಾಟಕ್ಕೆ ಅವಕಾಶವಿದೆ ಎಂದು ಘೋಷಿಸಿ ಕೇವಲ 30 ನಿಮಿಷಗಳಲ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸಿರುವುದು ಸರಿಯಲ್ಲ. ಇಂದು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಂಸ ಸೇವಿಸಿದರೆ ಯಾವುದೇ ತೊಂದರೆ ಇಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕೊಡಗಿನಲ್ಲಿ ಮಾರಾಟಕ್ಕೆ ಯಾಕೆ ಅವಕಾಶ ನೀಡುತ್ತಿಲ್ಲವೆಂದು ಗಣೇಶ್ ಪ್ರಶ್ನಿಸಿದ್ದಾರೆ.
ಎನ್-95 ಮಾಸ್ಕ್ ನೀಡಿ
ಕೊರೋನಾ ಸೋಂಕು ಪೀಡಿತರಿಗೆ ಮತ್ತು ಶಂಕಿತರಿಗೆ ಚಿಕಿತ್ಸೆ ನೀಡಲು ರಾತ್ರಿ, ಹಗಲು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಎಲ್ಲಾ ಶುಶ್ರೂಷಕಿಯರಿಗೆ, ಸಿಬ್ಬಂದಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗುಣಮಟ್ಟದ ಎನ್-95 ಮಾಸ್ಕ್‍ನ್ನು ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದರೂ ಜಿಲ್ಲೆಯ ಸಿಬ್ಬಂದಿಗಳಿಗೆ ಯೋಗ್ಯವಾದ ಮಾಸ್ಕ್‍ಗಳನ್ನು ನೀಡುತ್ತಿಲ್ಲವೆಂದು ಆರೋಪಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: