ಮೈಸೂರು

ರಾಮನವಮಿ ಪ್ರಯುಕ್ತ ಕೊರೋನಾ ಸೋಂಕಿಗೆ ರಾಮಬಾಣ ಬಿಡುವ ಕಾರ್ಯಕ್ರಮಕ್ಕೆ ಸಚಿವ ವಿ.ಸೋಮಣ್ಣ ಚಾಲನೆ

ಮೈಸೂರು,ಏ.2:- ಶ್ರೀ ರಾಮನವಮಿಯ ಅಂಗವಾಗಿ ನರಸಿಂಹರಾಜ‌ ಕ್ಷೇತ್ರದ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿಂದು  “ಶ್ರಿರಾಮನ ಜಪಿಸೋಣ ಕೊರೋನಾ ಓಡಿಸೋಣ” ವಿಶೇಷ ಧಾರ್ಮಿಕ ಕಾರ್ಯಕ್ರಮದ ಮೂಲಕ ಕೊರೋನ ಮುಕ್ತ ಮೈಸೂರಿಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ  ಅವರು ಕೊರೋನಾ ಸೋಂಕಿಗೆ ರಾಮಬಾಣ ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಪ್ರತಿದಿನ ಆಹಾರ ವ್ಯವಸ್ಥೆಯನ್ನು ನಿರ್ಗತಿಕರಿಗೆ ಒದಗಿಸುತ್ತಿರುವ ಕಲ್ಯಾಣ ಲಕ್ಷ್ಮಿವೆಂಕಟರಮಣ ದೇವಸ್ಥಾನದಲ್ಲಿ ಇಂದು  ಆಹಾರ ವಿತರಿಸಲಾಯಿತು.  ಸಚಿವ  ವಿ. ಸೋಮಣ್ಣ   ಮಾತನಾಡಿ ಭಾರತದಲ್ಲಿ ಕೋಟ್ಯಂತರ ಹಿಂದೂಗಳ  ಆಚರಣೆ ಶ್ರೀರಾಮನವಮಿ, ಆದರೆ ಚೀನಿ ಕೊರೋನಾ ತೊಂದರೆಯಿಂದ ನಾವೆಲ್ಲರೂ ಮನೆಯಲ್ಲೇ ಕುಟುಂಬ ಸಮೇತ ಆಚರಿಸಿ ಕೊರೋನಾ ಮುಕ್ತ ಮೈಸೂರಿಗಾಗಿ ಪ್ರಾರ್ಥಿಸೋಣ . ಪಾಶ್ಚಾತ್ಯ ಸಂಪ್ರದಾಯ ಹೊರದೇಶದ ವ್ಯಾಮೋಹವಿಲ್ಲದಿದ್ದರೆ ಕೊರೋನಾವೆಂಬ ಯಾವ ರೋಗವು ಭಾರತದತ್ತ ಬರುತ್ತಿರಲಿಲ್ಲ.  ಈಗಾಗಲೇ ಮೈಸೂರಿನಲ್ಲಿ ಮನೆಬಾಗಿಲಿಗೆ ತುರ್ತು ಅಗತ್ಯ ಸೇವೆಗಳಾದ ದಿನಸಿ, ಹಾಲು, ತರಕಾರಿ, ಹಣ್ಣು, ಹೂವು, ಸೊಪ್ಪು, ಮೆಡಿಕಲ್ ವ್ಯವಸ್ಥೆ ಸೇರಿದಂತೆ  ಹಲವು ವ್ಯವಸ್ಥೆಗಳನ್ನು ಒದಗಿಸಲು ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ. ಹಿರಿಯ ನಾಗರೀಕರು ಮತ್ತು ಸಣ್ಣಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸೋಣ ಎಂದರು

ಸಂಸದ ಪ್ರತಾಪ್  ಸಿಂಹ ಮಾತನಾಡಿ ಕೊರೋನಾ ಸೋಂಕು  ತಡೆಗಟ್ಟಲು ಭಾರತ ಲಾಕ್ ಡೌನ್  ಆದೇಶ ದೇಶದ ಕಟ್ಟ ಕಡೆಯ ಭಾರತೀಯನನ್ನೂ ಕಾಪಾಡುವುದಾಗಿದೆ.   4ನೇ ಹಂತದಲ್ಲಿ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳಬೇಕಾದರೆ ಪ್ರತಿಯೊಬ್ಬ ನಾಗರೀಕರೂ ಮನೆಯಲ್ಲೇ ಇರಬೇಕು, ಚೀನಿ ಉತ್ಪನ್ನ ಪದಾರ್ಥಗಳನ್ನು ಭಾರತದಿಂದ ನಿರ್ಮೂಲನೆ ಮಾಡಬೇಕಿದೆ. ಮೋದಿಜೀ ಅವರ ಕರೆಯಂತೆ ಮೇಕ್ ಇನ್ ಇಂಡಿಯಾ ಮುಂದಿನ ದಿನದಲ್ಲಿ ಪ್ರೇರೆಪಿಸಲು ನಾವೆಲ್ಲರೂ ಸ್ವದೇಶಿ ಉತ್ಪನ್ನವನ್ನು ಮಾತ್ರ ಖರೀದಿಸಲು ಮುಂದಾದರೆ ದೇಶದ ಭವಿಷ್ಯ ಪ್ರಜ್ವಲವಾಗಿರುತ್ತದೆ ಎಂದರು.

ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಮಾತನಾಡಿ ಕೊರೋನಾ ಸೊಂಕು ತಡೆಗಟ್ಟಲು ಜಿಲ್ಲಾಡಳಿತ ನಗರಪಾಲಿಕೆ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದೆ.  ಆದರೂ ಸಹ ಸಂಘ ಸಂಸ್ಥೆಗಳು ಜನಸಾಮಾನ್ಯರೂ ಕೈಜೋಡಿಸಿ ಸರ್ಕಾರದ ನಿರ್ದೇಶನವನ್ನು ಪಾಲಿಸಿ ಮನೆಯಲಿದ್ದರೆ ಮಾತ್ರ ಕೊರೋನಾ ಮುಕ್ತ ಮೈಸೂರು ಮಾಡಲು ಸಾಧ್ಯವಾಗುತ್ತದೆ.  ಪ್ರತಿಯೊಬ್ಬರೂ ನಮ್ಮ ಸುತ್ತಮುತ್ತಲಿನ 10 ಮನೆಗಳನ್ನು ನೋಡಿಕೊಳ್ಳಲು ಮುಂದಾಗಬೇಕು, ಹಿರಿಯ ನಾಗರೀಕರು, ಅಶಕ್ತರಿರುವವರಿಗೆ ಆರೋಗ್ಯ ಸೇವೆ ಮತ್ತು ಆಹಾರ ಕಲ್ಪಿಸಬೇಕು. ಮನೆ ಮನೆಗೆ ದಿನಸಿ, ಮೆಡಿಕಲ್, ಅಗತ್ಯಕರ ಸೇವೆ , ಅವಶ್ಯಕವಿರುವವರಿಗೆ ಬಿಜೆಪಿ ನಗರ ಘಟಕದಿಂದ ನಾಗರೀಕ ಟಾಸ್ಕ್ ಪೋರ್ಸ್ ಕಾರ್ಯನಿರ್ವಹಿಸುತ್ತಿದೆ ಎಂದರು.

ಈ ಸಂದರ್ಭ ಅವಧೂತ ಗಣಪತಿ ಸಚ್ಚಿದಾನಂದ ಆಶ್ರಮದ ಆಡಳಿತಾಧಿಕಾರಿಗಳು ಪ್ರಸಾದ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ  ಶ್ರೀ ಕಲ್ಯಾಣ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ  ಎಚ್ ಜಿ ಗಿರಿಧರ್ , ಪ್ರಭಾರಿಗಳಾದ ಮೈ ವಿ ರವಿಶಂಕರ್,ಬಿ ಪಿ ಮಂಜುನಾಥ್, ಬಿಜೆಪಿ ಯುವ ಮುಖಂಡ ವಿಕ್ರಂ ಅಯ್ಯಂಗಾರ್ ,ಕೇಬಲ್ ಮಹೇಶ್ , ನಾಗರಾಜು, ಮುನಿರತ್ನಂ, ಕಾರ್ತಿಕ್ ನಾಯಕ್, ಕಾರ್ತಿಕ್ ಕುಮಾರ್, ರಾಮು  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: