ಪ್ರಮುಖ ಸುದ್ದಿ

ಮಾಂಸ ಮತ್ತು ಮದ್ಯ ಮಾರಾಟಕ್ಕೆ ಅವಕಾಶ ಬೇಡ : ರವಿಕುಶಾಲಪ್ಪ ಒತ್ತಾಯ

ರಾಜ್ಯ( ಮಡಿಕೇರಿ) ಏ.3 :- ಕೊರೋನಾ ವೈರಸ್ ಹರಡದಂತೆ ಜಿಲ್ಲಾಡಳಿತ ಅಗತ್ಯ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಕೊಡಗಿನ ಸ್ಥಿತಿ, ಗತಿ ನಿಯಂತ್ರಣದಲ್ಲಿದೆ. ಪರಿಸ್ಥಿತಿ ಸಂಪೂರ್ಣವಾಗಿ ಸರಿಯಾಗುವಲ್ಲಿಯವರೆಗೆ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಮಾಂಸ ಮತ್ತು ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದೆಂದು ಜಿ.ಪಂ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಪ್ರಮುಖ ಶಾಂತೆಯಂಡ ರವಿಕುಶಾಲಪ್ಪ ಒತ್ತಾಯಿಸಿದ್ದಾರೆ.
ಮಾಧ್ಯಮ ಪ್ರಕಟಣೆ ನೀಡಿರುವ ಅವರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಪ್ರಾಮಾಣಿಕ ಪ್ರಯತ್ನದಿಂದ ಇಂದು ಕೊಡಗು ಜಿಲ್ಲೆ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ. ಕೊರೋನಾ ವೈರಸ್ ವಿರುದ್ಧ ತುರ್ತಾಗಿ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಜಿಲ್ಲೆಯ ಜನ ಸುರಕ್ಷಿತರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮಿತಿ ಮೀರಿದ್ದರೂ ಪಕ್ಕದಲ್ಲೇ ಇರುವ ಕೊಡಗು ಜಿಲ್ಲೆಯ ಸ್ಥಿತಿ ನಿಯಂತ್ರಣದಲ್ಲಿದೆ ಎಂದರೆ ಅದಕ್ಕೆ ಜಿಲ್ಲಾಡಳಿತ ತೆಗೆದುಗೊಂಡಿರುವ ಮುಂಜಾಗೃತಾ ಕ್ರಮಗಳೇ ಕಾರಣವಾಗಿದೆ. ಈ ನಡುವೆ ಕೆಲವರು ಮಾಂಸ ಮತ್ತು ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದು, ಈ ಬೇಡಿಕೆಯನ್ನು ವಿರೋಧಿಸುವುದಾಗಿ ರವಿಕುಶಾಲಪ್ಪ ತಿಳಿಸಿದ್ದಾರೆ.
ಕೊಡಗಿನ ಜನರ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಮದ್ಯ ಮತ್ತು ಮಾಂಸವನ್ನು ಮಾರಾಟ ಮಾಡಲು ಜಿಲ್ಲಾಡಳಿತ ಅನುಮತಿ ನೀಡಬಾರದೆಂದು ಒತ್ತಾಯಿಸಿರುವ ಅವರು, ಸಸ್ಯಹಾರಿ ಖಾದ್ಯಗಳೇ ಆರೋಗ್ಯವರ್ಧಕವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಡೀ ವಿಶ್ವವೇ ಸಂಕಷ್ಟದಲ್ಲಿದ್ದು, ಸ್ವಲ್ಪ ದಿನದ ಮಟ್ಟಿಗಾದರೂ ತ್ಯಾಗ ಮನೋಭಾವವನ್ನು ಅನುಸರಿಸಬೇಕಾಗಿದೆ. ಈ ರೀತಿಯ ತ್ಯಾಗದಿಂದ ಪ್ರತಿಯೊಬ್ಬ ವ್ಯಕ್ತಿ ಮತ್ತು ಆತನ ಕುಟುಂಬ ವರ್ಗ, ಬಂಧು ಬಳಗದ ಜೀವ ಉಳಿಸಬಹುದಾಗಿದೆ ಎಂದು ಹೇಳಿದ್ದಾರೆ.
ಧರ್ಮಗುರುಗಳು ಬುದ್ದಿ ಹೇಳಲಿ
ವಿಶ್ವದ ಅನೇಕ ರಾಷ್ಟ್ರಗಳು ಕೊರೋನಾ ವೈರಸ್‍ನಿಂದಾಗ ತತ್ತರಿಸಿ ಹೋಗಿವೆ. ಎಲ್ಲಿಯೂ ಸಾಮೂಹಿಕ ಸಭೆ, ಸಮಾರಂಭ, ಪ್ರಾರ್ಥನೆಗಳಿಗೆ ಅವಕಾಶವಿಲ್ಲ. ಮುಸ್ಲಿಂ ರಾಷ್ಟ್ರಗಳಲ್ಲೇ ಮಸೀದಿಗಳಿಗೆ ಬೀಗ ಜಡಿದು ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂಧಿಸಲಾಗಿದೆ. ಆದರೆ ಭಾರತದಲ್ಲಿ ಲಾಕ್‍ಡೌನ್ ಆದೇಶ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದರೂ ಕೆಲವರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿರುವ ದೃಶ್ಯಗಳು ಕಂಡು ಬರುತ್ತಿವೆ. ದೇಶದ ಕಾನೂನನ್ನು ಉಲ್ಲಂಘಿಸುತ್ತಿರುವ ಮಸೀದಿಗಳ ಪ್ರಮುಖರಿಗೆ ಧರ್ಮಗುರುಗಳು ಕಿವಿಮಾತು ಹೇಳುವ ಅಗತ್ಯವಿದೆ ಎಂದು ರವಿಕುಶಾಲಪ್ಪ ತಿಳಿಸಿದ್ದಾರೆ.
ಸಮಸ್ಯೆ ಬಗೆಹರಿದ ಮೇಲೆ ಪ್ರಾರ್ಥನೆಗೆ ಅವಕಾಶವಿದೆ, ಆದರೆ ಕೆಲವರು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ವಿಡಿಯೋಗಳನ್ನು ಹರಿ ಬಿಡುತ್ತಿದ್ದಾರೆ. ಈ ದೇಶದ ಮೇಲೆ ಅಭಿಮಾನವುಳ್ಳ ಪ್ರತಿಯೊಬ್ಬ ಗುರು ಹಿರಿಯರು ಹಾದಿ ತಪ್ಪುತ್ತಿರುವ ಸಮೂಹಕ್ಕೆ ಬುದ್ದಿಮಾತು ಹೇಳುವುದು ಸೂಕ್ತವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ಮಾಡುವ ತಪ್ಪಿನಿಂದಾಗಿ ಇಡೀ ಸಮೂಹಕ್ಕೆ ಕೆಟ್ಟ ಹೆಸರು ಬರುವುದರಿಂದ ಮುಸಲ್ಮಾನ ಸಮುದಾಯ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ರವಿಕುಶಾಲಪ್ಪ ಸಲಹೆ ನೀಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: