ಪ್ರಮುಖ ಸುದ್ದಿ

ಏ.5ರಂದು ದೀಪ ಬೆಳಗುವ ಮೂಲಕ ಅಂಧಕಾರ ಓಡಿಸಿ ಜಗತ್ತಿಗೆ ನಾವು ಒಂಟಿಯಲ್ಲ ಎಂದು ಸಾರೋಣ : ಪ್ರಧಾನಿ ಮೋದಿ ಸಂದೇಶ

ದೇಶ(ನವದೆಹಲಿ)ಏ.3:-  ದೇಶದ ಜನರಿಗಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. 11 ನಿಮಿಷ 30 ಸೆಕೆಂಡ್‌ಗಳ ವಿಡಿಯೊದಲ್ಲಿ ‘ಕೊರೊನಾ ಅಂಧಕಾರ ಓಡಿಸಲು ಎಲ್ಲರೂ ಒಂದೇ ಸಮಯಕ್ಕೆ ದೀಪ ಬೆಳಗೋಣ, ಜಗತ್ತಿಗೆ ನಾವು ಯಾರೂ ಒಂಟಿಯಲ್ಲ ಎಂದು ಸಾರೋಣ’ ಎಂಬ ಸಂದೇಶ ನೀಡಿದ್ದಾರೆ.

‘ಮನೆಯಲ್ಲಿ ಒಬ್ಬರೇ ಏನು ಮಾಡಬೇಕು. ವೈರಸ್‌ ವಿರುದ್ಧದ ಯುದ್ಧವನ್ನು ಒಬ್ಬರೇ ಹೇಗೆ ಹೋರಾಡಲು ಸಾಧ್ಯವಾಗುತ್ತದೆ. ನಾವು ಮನೆಯೊಳಗೆ ಇದ್ದೇವೆ, ಆದರೆ ನಾವು ಯಾರೂ ಒಂಟಿಯಲ್ಲ. ದೇಶದ ಎಲ್ಲ ಜನರೂ ನಮ್ಮೊಂದಿಗಿದ್ದಾರೆ. ಜನರ ಒಗ್ಗಟ್ಟಿನ ಶಕ್ತಿ ಆಗಾಗ್ಗೆ ವ್ಯಕ್ತವಾಗುತ್ತಲೇ ಇರುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮನೆಯೊಳಗಿದ್ದೇ ಕೊರೊನಾ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆಯನ್ನು ತಿಳಿಸಿದ್ದಾರೆ.

‘ಏಪ್ರಿಲ್‌ 5ರಂದು ಭಾನುವಾರ, ಕೊರೊನಾ ಸಂಕಟದ ಅಂಧಕಾರವನ್ನು ಓಡಿಸಲು ರಾತ್ರಿ 9 ಗಂಟೆಗೆ ನಿಮ್ಮೆಲ್ಲರಿಂದ 9 ನಿಮಿಷ ಬೇಕು. ಎಲ್ಲರೂ ವಿದ್ಯುತ್‌ ಬಂದ್ ಮಾಡಿ, ನಿಮ್ಮ ಮನೆಯ ಮಹಡಿಗಳಲ್ಲಿ ನಿಂತು, ಮೇಣದ ಬತ್ತಿ, ದೀಪ, ಟಾರ್ಚ್‌ ಅಥವಾ ಮೊಬೈಲ್‌ ಲೈಟ್‌ ಹಿಡಿದು ಒಂಭತ್ತು ನಿಮಿಷಗಳ ವರೆಗೂ ಬೆಳಗಿ.   ಈ ಪ್ರಕಾಶದಿಂದ, ಉಜ್ವಲದಿಂದ ನಮ್ಮ ಮನದಲ್ಲಿ ನಾವು ಒಂಟಿಯಲ್ಲ ಎಂಬ ಸಂಕಲ್ಪ ಮಾಡಿ. ಯಾರೂ ಇಲ್ಲಿ ಒಂಟಿಯಲ್ಲ. 130 ಕೋಟಿ ಜನರು ಒಟ್ಟಿಗಿದ್ದೇವೆ. ಇದರಿಂದ ಯಾರಿಗೂ, ಎಲ್ಲಿಯೂ ಯಾವುದೇ ಕಾರಣಕ್ಕೂ ತೊಂದರೆ ಉಂಟಾಗಬಾರದು. ಅದನ್ನು ನೀವೆಲ್ಲರೂ  ಗಮನಿಸಬೇಕು. ಆದರೆ ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮರೆಯಬೇಡಿ   ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: