ಮೈಸೂರು

ಅನುದಾನ ರಹಿತ ಶಾಲೆಗಳು ಕಾನೂನು ಹಾಗೂ ಕಾಯ್ದೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು : ಸಿ.ಜಿ.ಮೊಹಮ್ಮದ್ ಮುಜೀರುಲ್ಲ

ಖಾಸಗಿ ಶಾಲೆಗಳು ಹೆಚ್ಚು ಶುಲ್ಕ ಪಡೆಯುತ್ತವೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ. ಅನುದಾನ ರಹಿತ ಶಾಲೆಗಳು ಈ ಮನೋಭಾವನೆಯನ್ನು ಹೋಗಲಾಡಿಸುವ ದಿಕ್ಕಿನಲ್ಲಿ ಕೆಲಸ ಮಾಡಬೇಕಿದ್ದು, ಶಿಕ್ಷಣದ ಕಾನೂನು ಹಾಗೂ ಕಾಯ್ದೆಗಳನ್ನು ಚಾಚೂತಪ್ಪದೆ ಪಾಲಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ಮೊಹಮದ್ ಮುಜೀರುಲ್ಲ ತಿಳಿಸಿದರು.
ಗುರುವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಸಿಕೆಸಿ ಕಾನ್ವೆಂಟ್‍ನಲ್ಲಿ ಆಯೋಜಿಸಿದ್ದ ಅನುದಾನರಹಿತ ಶಾಲೆಗಳ ಶುಲ್ಕ ನಿಗದಿ ಮತ್ತು ಆರ್‍ಟಿಇ ಕಾಯ್ದೆಗಳ ಬಗ್ಗೆ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಮಾಜಕ್ಕೆ ಅನುದಾನರಹಿತ ಶಾಲೆಗಳ ಕೊಡುಗೆ ಅರ್ಥಪೂರ್ಣ ಹಾಗೂ ಬಹುಮುಖ್ಯ. ಸಮಾಜಕ್ಕೆ ನೂರಾರು ಮಹನೀಯರನ್ನು ನೀಡಿದ ಕೀರ್ತಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಲ್ಲುತ್ತದೆ. ಖಾಸಗಿ ಶಾಲೆಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದ್ದು, ಇದರಿಂದ ಸರ್ಕಾರಿ ಶಾಲೆಗಳು ಎಚ್ಚೆತ್ತುಕೊಳ್ಳುವಂತಾಗಿದೆ. ಗುಣಾತ್ಮಕ ಸ್ಪರ್ಧೆಯನ್ನು ಖಾಸಗಿ ಶಾಲೆಗಳು ಸೃಷ್ಟಿಸಿದ್ದು ಶಿಕ್ಷಣ ಕ್ಷೇತ್ರ ಅಪಾರ ಬದಲಾವಣೆಗಳನ್ನು ಕಂಡಿದೆ ಎಂದು ಹೇಳಿದರು.
ಅನುದಾನ ರಹಿತಶಾಲೆಗಳು ಸರ್ಕಾರಕ್ಕೆ ಉತ್ತಮ, ಪಾರದರ್ಶಕ, ಜನಪರ ಶಿಕ್ಷಣವನ್ನು ನೀಡುತ್ತೇವೆ ಎಂದು ನೀಡಿದ್ದ ಭರವಸೆಯನ್ನು ಎಷ್ಟರ ಮಟ್ಟಿಗೆ ಈಡೇರಿಸಿವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. 2016-17ನೇ ಸಾಲಿನಲ್ಲಿ ಮೈಸೂರು ತಾಲೂಕಿನ 129 ಶಾಲೆಗಳು ಶುಲ್ಕ ನಿಗದಿ ಮಾಡಿಲ್ಲ. ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಶುಲ್ಕವನ್ನು ಕಂತುಗಳಲ್ಲಿ ಪಾವತಿಸುವ ಅವಕಾಶ ನೀಡಲಾಗಿದ್ದು ಯಾವ ಶಾಲೆಯೂ ಶುಲ್ಕ ಪಾವತಿಯ ವಿವೇಚನೆಯನ್ನು ಪೋಷಕರಿಗೆ ಬಿಟ್ಟಿಲ್ಲ. ಅಷ್ಟೇ ಏಕೆ 1995ರ ಶಿಕ್ಷಣ ಕಾಯ್ದೆಯ ನಿಯಮಗಳನ್ನೇ ಸರಿಯಾಗಿ ಪಾಲಿಸುತ್ತಿಲ್ಲ. ಇನ್ನಾದರೂ ಖಾಸಗಿ ಶಾಲೆಗಳು ಶಿಕ್ಷಣದ ಕಾಯ್ದೆ, ಕಾನೂನುಗಳನ್ನು ಪಾಲಿಸುವುದರೊಂದಿಗೆ ಮಕ್ಕಳಿಗೆ ಶಿಕ್ಷಣದೊಂದಿಗೆ ನೈತಿಕ ಶಿಕ್ಷಣವನ್ನೂ ನೀಡಬೇಕು. ಮಕ್ಕಳು ನಮ್ಮ ಸಂಸ್ಕೃತಿ ಪರಂಪರೆಯನ್ನು ಮರೆಯುತ್ತಿದ್ದು, ಪರಿಣಾಮಕಾರಿ ನೈತಿಕ ಶಿಕ್ಷಣವನ್ನು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕಾರಣವಾಗಬೇಕು ಎಂದು ಹೇಳಿದರು.
ಇದೇ ವೇಳೆ ಚಾಮರಾಜನಗರ ಡಯಟ್‍ನ ಹಿರಿಯ ಉಪನ್ಯಾಸಕ ಲಿಂಗರಾಜೇ ಅರಸ್, ಎಂ.ಕೆ.ಸ್ವಾಮಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ಜಿಲ್ಲಾ ಪಂಚಾಯತ್ ಸಿಇಓ ಶಿವಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್.ಆರ್.ಬಸಪ್ಪ, ಶಿಕ್ಷಣಾಧಿಕಾರಿಗಳಾದ ಎಂ.ಆರ್.ಶಿವರಾಮು, ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: