ಮೈಸೂರು

ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆ : ಮನೆಮನೆಗೆ ಎರಡು ತಿಂಗಳ ಪಡಿತರಕ್ಕೆ ಚಾಲನೆ

ಮೈಸೂರು,ಏ.3:- ಕೋವಿಡ್ 19(ಕೊರೋನಾ ವೈರಸ್) ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಂಬಂಧ ರಾಜ್ಯವು ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತವು ಸಾಮಾನ್ಯ ಜನರಿಗೆ ಅಗತ್ಯ ವಸ್ತುಗಳು ಎಂದಿನಂತೆ ಲಭ್ಯವಾಗಬೇಕೆಂಬ ಉದ್ದೇಶದಿಂದ ಅಗತ್ಯ ವಸ್ತುಗಳ ಸಾಗಾಣಿಕೆ ಮತ್ತು ವಹಿವಾಟುಗಳಿಗೆ ಯಾವುದೇ ನಿರ್ಬಂಧವಿಲ್ಲದೆ ಯತಾಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಎಲ್ಲಾ ಅನುಕೂಲಗಳನ್ನು ಕಲ್ಪಿಸಿಕೊಡಲಾಗಿದೆ.

ಅಗತ್ಯ ವಸ್ತುಗಳನ್ನು ಮಾರಾಟಗಾರರು ಕೃತಕ ಅಭಾವ ಸೃಷ್ಟಿಸದಂತೆ ಮಾರಾಟಕ್ಕೆ ತಡೆ ಹಿಡಿಯದಂತೆ ಮತ್ತು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ನೋಡಿಕೊಳ್ಳುವ ಸಂಬಂಧ ಜಿಲ್ಲೆಯಲ್ಲಿ ತನಿಖಾ ತಂಡಗಳನ್ನು ನೇಮಿಸಲಾಗಿದ್ದು ಯಾವುದೇ ವಸ್ತುಗಳು ಮಾರಾಟದಿಂದ ತಡೆಹಿಡಿಯದೆ ಸಾಮಾನ್ಯ ಜನರಿಗೆ ಎಂದಿನಂತೆ ಲಭ್ಯವಾಗುವಂತೆ ಮಾಡುವಲ್ಲಿ ಮೈಸೂರು ಜಿಲ್ಲಾಡಳಿತ ಶ್ರಮಿಸುತ್ತಿದೆ.

ಕೊರೋನಾ ಹರಡುವಿಕೆಯನ್ನು ತಡೆಗಟ್ಟಲು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕಾರಣದಿಂದ ಬಡಜನರಿಗೆ ಅನಾನುಕೂಲವಾಗಬಾರದೆಂಬ ದೃಷ್ಟಿಯಿಂದ ರಾಜ್ಯ ಸರ್ಕಾರವು ಏಪ್ರೀಲ್ ಮತ್ತು ಮೇ 2020ರ ಮಾಹೆಯ ಪಡಿತರವನ್ನು  ಏಪ್ರೀಲ್ ನಲ್ಲಿಯೇ ವಿತರಿಸುತ್ತಿದ್ದು,  ಇಂದು ಮನೆಮನೆಗೆ ಪಡಿತರಕ್ಕೆ ಶಾಸಕರುಗಳಾದ  ಎಸ್.ಎ.ರಾಮದಾಸ್,  ಜಿ.ಟಿ.ದೇವೇಗೌಡ, ನಾಗೇಂದ್ರ ಸಂಸದ ಪ್ರತಾಪ್‌ ಸಿಂಹ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಪಡಿತರ ಚೀಟಿ ವರ್ಗ ಅಂತ್ಯೋದಯ(ಎಎಎವೈ) ಅಕ್ಕಿ ಪ್ರತಿ ಕಾರ್ಡಿಗೆ 35ಕೆ.ಜಿಯಂತೆ ಒಟ್ಟು 70ಕೆ.ಜಿ, ಆದ್ಯತಾ ಪಡಿತರ ಚೀಟಿ(ಬಿಪಿಎಲ್) ಪ್ರತಿ ಸದಸ್ಯರಿಗೆ 5ಕೆಜಿಯಂತೆ ಒಟ್ಟು ಹತ್ತು ಕೆಜಿ, ಗೋಧಿ ಪ್ರತಿ ಕಾರ್ಡಿಗೆ 2ಕೆ.ಜಿಯಂತೆ ಒಟ್ಟು 4ಕೆಜಿ, ಆದ್ಯತೇತರರ ಪಡಿತರ ಚೀಟಿ(ಎಪಿಎಲ್) ಎರಡು ಮತ್ತು ಎರಡಕ್ಕಿಂತ ಹೆಚ್ಚಿನ ಸದಸ್ಯರ ಪಡಿತರ ಚೀಟಿಗೆ 10ಕೆ.ಜಿಯಂತೆ ಒಟ್ಟು 20ಕೆ.ಜಿ. ಪಡಿತರವನ್ನು ಪಡೆಯಲು ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಯ ಮುಂದೆ ಗುಂಪುಗೂಡುವುದರ ಮೂಲಕ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರವು ಮೈಸೂರು ನಗರದಲ್ಲಿರುವ 206 ನ್ಯಾಯಬೆಲೆ ಅಂಗಡಿಗಳ ಅಂತ್ಯೋದಯ-1705 ಮತ್ತು ಆದ್ಯತಾ ಪಡಿತರ ಚೀಟಿ 129551 ಮತ್ತು ಆದ್ಯತೇತರ ಪಡಿತರ ಚೀಟಿ 16232 ಸೇರಿ ಒಟ್ಟು 147488 ಪಡಿತರ ಚೀಟಿದಾರರಿಗೆ ಅವರ ಪಡಿತರವನ್ನು ಅವರವರ ಮನೆ ಬಾಗಿಲಿಗೆ ನ್ಯಾಯಬೆಲೆ ಅಂಗಡಿದಾರರ ಮೂಲಕ ತಲುಪಿಸುವ ವಿನೀತನ ಯೋಜನೆಯನ್ನು ಹಮ್ಮಿಕೊಂಡಿದೆ. ಇಂದು ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಗಿದ್ದು, ಪಡಿತರ ಚೀಟಿದಾರರು ಯಾವುದೇ ಆತಂಕಕ್ಕೆ ಒಳಗಾಗದೇ ಇದರ ಸದುಪಯೋಗವನ್ನು ಪಡೆಯುವಂತೆ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಒಟ್ಟು 1011 ನ್ಯಾಯಬೆಲೆ ಅಂಗಡಿಗಳಿದ್ದು ಇವುಗಳಲ್ಲಿ ಅಂತ್ಯೋದಯ 50444, ಆದ್ಯತಾ ಪಡಿತರ ಚೀಟಿ 655751 ಮತ್ತು ಆದ್ಯತೇತರ ಪಡಿತರ ಚೀಟಿ 26343 ಒಟ್ಟು 732538 ಪಡಿತರ ಚೀಟಿಗಳ ಹಂಚಿಕೆ ಇರುತ್ತವೆ ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪಿ.ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: