ಪ್ರಮುಖ ಸುದ್ದಿ

ನ್ಯಾಯಾಧೀಶರಿಂದ ಮನೆಮನೆ ಜಾಗೃತಿ : ಕೊರೋನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಮನವಿ

ರಾಜ್ಯ( ಮಡಿಕೇರಿ) ಏ.4 :- ವಿಶ್ವದಾದ್ಯಂತ ಹರಡಿರುವ ಕೊರೋನ ವೈರಸ್ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸರ್ಕಾರ ಘೋಷಿಸಿರುವ ಲಾಕ್‍ಡೌನ್ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಕರೆ ನೀಡಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕೊರೊನಾ ವೈರಸ್ ನಿಯಂತ್ರಣ ಮಾಡುವಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ನಾಗರಿಕರಿಗೆ ಕರಪತ್ರ ಹಂಚುವ ಕಾರ್ಯಕ್ಕೆ ಚಾಲನೆ ನೀಡಿದ ಅವರು ಕೊರೋನಾ ವೈರಸ್ ವಿರುದ್ಧ ಜನರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸ ಅವರು ತಿಳಿಸಿದರು.
ಅರೆಕಾಲಿಕ ಸ್ವಯಂ ಸೇವಕರು ಹಾಗೂ ಪೆನೆಲ್ ವಕೀಲರು ಕರಪತ್ರ ಹಂಚುವ ಸಂದರ್ಭ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾನೂನು ಸ್ವಯಂ ಸೇವಕರೊಂದಿಗೆ ನಗರದ ಪೌರ ಕಾರ್ಮಿಕರು ವಾಸಿಸುವ ವಸತಿ ಪ್ರದೇಶಕ್ಕೆ ತೆರಳಿದ ನ್ಯಾಯಾಧೀಶರಾದ ನೂರುನ್ನಿಸ ಕರಪತ್ರ ಹಂಚಿ ಕೊರೊನ ವೈರಸ್ ತಡೆಗೆ ವಹಿಸಬೇಕಾದ ಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿದರು.
ಅಪರ ಜಿಲ್ಲಾ ನ್ಯಾಯಾಧೀಶರಾದ ಚಂದ್ರಶೇಖರ, ಅಪರ ಸಿವಿಲ್ ನ್ಯಾಯಾಧೀಶರಾದ ಮನು, ಅರೆಕಾಲಿಕ ಕಾನೂನು ಸ್ವಯಂ ಸೇವಕರಾದ ಜಾಯ್ಸ, ಫಾತೀಮಾ. ಜಯಂತಿ, ರೂಪ, ಮುನೀರ್, ಶಿವಕುಮಾರ ಪೆನೆಲ್ ವಕೀಲರಾದ ಪದ್ಮ, ನಳಿನಿ ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: