ಮೈಸೂರು

ಮನೆಮನೆಗೆ ತೆರಳಿ ಹಣತೆ ವಿತರಿಸಿ ದೀಪ ಬೆಳಗಲು ಕೋರಿದ ಅಪೂರ್ವ ಸ್ನೇಹ ಬಳಗ

ಮೈಸೂರು,ಏ.4:- ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂ ಸುತ್ತಮುತ್ತ ಮನೆಮನೆಗೆ ತೆರಳಿ ಹಣತೆಯನ್ನು ನೀಡಿ ಭಾನುವಾರ ದೀಪ ಬೆಳಗಲು ಕೋರಲಾಯಿತು.

ನಂತರ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯರಾದ ಮಾವಿ ರಾಮಪ್ರಸಾದ್   ದೇಶದಲ್ಲಿ ಕೊರೋನಾ ವೈರಸ್ ಹರಡಬಾರದೆಂದು ಕೇಂದ್ರ ಸರ್ಕಾರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ದೇಶದ ಪ್ರಧಾನಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸಿಸಿದೆ.

ಇಂತಹ ಸಮಯದಲ್ಲಿ ಪಕ್ಷಾತೀತವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಣಯಗಳಿಗೆ ಭಾರತೀಯರಾದ ನಾವುಗಳು ಸಹಕರಿಸಬೇಕಾಗಿದ್ದು, ವೈರಸ್ ನಿಂದ ಭಾರತಕ್ಕೆ ಮುಕ್ತಿ ನೀಡಬೇಕಾದದ್ದು ನಮ್ಮ ಕರ್ತವ್ಯ. ಅದೇ ನಿಟ್ಟಿನಲ್ಲಿ   ಪ್ರಧಾನಿಗಳ ಮನವಿಗೆ ನಾವುಗಳು ಕೂಡ ಸಹಕರಿಸಿ ಇದೇ ಭಾನುವಾರ ರಾತ್ರಿ 9ಕ್ಕೆ ದೀಪ ಬೆಳಗುವುದರ ಮೂಲಕ ಈ ಸಂಕಷ್ಟದ ಸಮಯದಲ್ಲಿ ಕೊರೋನಾ ವಿರುದ್ಧ ಭಾರತೀಯರೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸುತ್ತೇವೆಂಬ ಸಂದೇಶ ನೀಡಬೇಕಿದೆ ಎಂದರು.

ಕೊರೋನಾ ವಿರುದ್ಧದ ಹೋರಾಟದಲ್ಲಿ ಶ್ರಮಿಸುತ್ತಿರುವ ಎಲ್ಲಾ ವೈದ್ಯರಿಗೂ, ಸ್ವಯಂ ಸೇವಕರಿಗೂ ನಾವೆಲ್ಲರೂ  ಜೊತೆಯಾಗಿದ್ದೇವೆ ಎಂಬುದನ್ನು ತೋರಬೇಕಿದೆ. ಎಲ್ಲಾ ರಾಜಕೀಯ ಪಕ್ಷಗಳು, ಎಲ್ಲಾ ಧರ್ಮಗಳು ತಮ್ಮದೇ ಆದ ಸಿದ್ದಾಂತಗಳನ್ನು ಹೊಂದಿದೆ. ಎಲ್ಲರಿಗೂ ಅವೆಲ್ಲದರ ಮೇಲೆ ಗೌರವವಿದೆ. ಆದರೆ ಈ ಸಮಯದಲ್ಲಿ ಎಲ್ಲವನ್ನೂ ಬದಿಗೊತ್ತಿ ಎಲ್ಲರೂ ಒಗ್ಗಟ್ಟಾಗಿ ದೇಶವನ್ನು ಕೊರೋನಾ ಮುಕ್ತ ಮಾಡುವತ್ತ ಮಾತ್ರ ಗಮನ ಹರಿಸಿಬೇಕಿದೆ.

ವಸುದೈವ ಕುಟುಂಬಕಂ, ಸರ್ವೇ ಜನಾಃ ಸುಖಿನೋ ಭವಂತು ಎಂದು ವಿಶ್ವದ ಎಲ್ಲರೂ ಒಂದೇ ಕುಟುಂಬ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಅಂಗಡಿಗಳು ಬಾಗಿಲು ತೆರೆಯದಿರುವ ಕಾರಣ  ಅಪೂರ್ವ ಸ್ನೇಹ ಬಳಗದಿಂದ ಸುಮಾರು 150 ಮನೆಗಳಿಗೆ ಜೋಡಿ ಹಣತೆ ನೀಡಿ ಭಾನುವಾರ ರಾತ್ರಿ 9 ಗಂಟೆಗೆ ದೀಪ ಬೆಳಗಿಸಲು ಕೋರಲಾಯಿತು.

ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ,ಲೋಕಸಭಾ ಸದಸ್ಯರಾದ ವಿ ಶ್ರೀನಿವಾಸ್ ಪ್ರಸಾದ್ ಅವರ ಸಹೋದರ ವಿ ರಾಮಸ್ವಾಮಿ ,ಮಾಜಿ ನಗರ ಪಾಲಿಕೆ ಸದಸ್ಯರಾದ ಎಂಡಿ ಪಾರ್ಥಸಾರಥಿ ,ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್ ,ರಾಕೇಶ್ ಭಟ್, ಸಿದ್ದೇಶ್,ಬಿಸಿ ಶಶಿಕಾಂತ್, ನಟರಾಜ, ಸಂದೀಪ್ ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: