ಪ್ರಮುಖ ಸುದ್ದಿ

ಜನರ ಮೂಲಭೂತ ಸಮಸ್ಯೆಗಳಿಗೂ ಸರ್ಕಾರ ಸ್ಪಂದಿಸಲಿ : ಕಾಂಗ್ರೆಸ್ ಒತ್ತಾಯ

ರಾಜ್ಯ( ಮಡಿಕೇರಿ) ಏ.4 :- ಕೊರೊನಾ ಸೋಂಕು ತಡೆಗಟ್ಟುವ ಕ್ರಮಗಳ ಸಂದರ್ಭ ಜನಸಾಮಾನ್ಯರ ಮೂಲಭೂತ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಕ್ಕೆ ಮುಂದಾಗಬೇಕೆಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿಯ ಕೊರೊನಾ ಸೋಂಕು ತಡೆಯ ಟಾಸ್ಕ್ ಫೋರ್ಸ್‍ನ ಕೊಡಗು ಜಿಲ್ಲಾ ಉಸ್ತುವಾರಿ ಆರ್.ಧರ್ಮಸೇನ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿನ ನಿಯಂತ್ರಣದ ಸರ್ಕಾರದ ಕ್ರಮಗಳಿಗೆ ನಮ್ಮ ಪೂರ್ಣ ಸಹಕಾರವಿದೆ. ಈ ಹಂತದಲ್ಲಿ ಸರ್ಕಾರ ಕೇವಲ ಕೊರೊನಾ ಒಂದನ್ನೇ ಕೇಂದ್ರೀಕರಿಸದೆ ಜನರ ಸಂಕಷ್ಟಗಳಿಗೂ ಸ್ಪಂದಿಸುವ ಅಗತ್ಯವಿದೆ ಎಂದರು.
ಕೊರೊನಾ ಸೋಂಕು ತಡೆಯ ಹಿನ್ನೆಲೆಯಲ್ಲಿ ಸರ್ಕಾರದ ಲಾಕ್ ಡೌನ್ ಮೊದಲಾದ ಕ್ರಮಗಳಿಂದ ಜನಸಾಮಾನ್ಯರು, ಗ್ರಾಮೀಣರು ತೊಂದರೆಗೆ ಒಳಗಾಗಿದ್ದಾರೆ. ಕೃಷಿಕರು ತಾವು ಬೆಳೆದ ಕಾಫಿ, ಕರಿಮೆಣಸು, ಶುಂಠಿ ಫಸಲಿನ ವಿಲೇವಾರಿಗೆ ತೊಂದರೆಯನ್ನು ಅನುಭವಿಸುವಂತಾಗಿದೆ. ಇಂತಹ ಲಾಕ್ ಡೌನ್‍ಗಳು ಜನ ಜೀವನದ ಮೇಲೆ ಮತ್ತು ಮನಸ್ಥಿತಿಯ ಮೇಲೆ ಗಾಢ ಪರಿಣಾಮವನ್ನು ಬೀರುತ್ತದೆ. ಈ ಹಿನ್ನೆಲೆ ಸರ್ಕಾರದ ಅಧಿಕಾರಿ ವರ್ಗ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಪರಿಸ್ಥಿತಿಯನ್ನು ಎದುರಿಸಬೇಕೆಂದು ತಿಳಿಸಿದರು.
ಮದ್ಯ ಮಾರಾಟವಾಗುತ್ತಿದೆ
ಪ್ರಸ್ತುತ ಮದ್ಯ ಮಾರಾಟಕ್ಕೆ ನಿರ್ಬಂಧವನ್ನು ವಿಧಿಸಲಾಗಿದೆ. ಆದರೆ, ದುಪ್ಪಟ್ಟು ಮತ್ತು ಅದಕ್ಕೂ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಹಿಂಬಾಗಿಲಿನಿಂದ ನಡೆಯುತ್ತಿದೆ. ಇಂತಹ ಕಾಳಸಂತೆಗೆ ಸರ್ಕಾರ ಲಗಾಮು ಹಾಕುವ ಅಗತ್ಯವಿದೆ ಎಂದು ಧರ್ಮಸೇನ ತಿಳಿಸಿದರು.
ಕೊರೊನಾ ಸೋಂಕು ತಡೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಗಳನ್ನು ಮುಚ್ಚಲಾಗಿದೆ. ಇಂತಹ ಸಂದರ್ಭ ಕ್ಯಾನ್ಸರ್ ಮೊದಲಾದ ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವವರನ್ನು ಚಿಕಿತ್ಸೆಗಾಗಿ ಬೇರೆಡೆಗೆ ಕರೆದೊಯ್ಯುವ ಜವಾಬ್ದಾರಿಯನ್ನು ಸರ್ಕಾರವೆ ವಹಿಸಿಕೊಳ್ಳಬೇಕು. ನಿಯಮಗಳು ತೀರಾ ಕಟ್ಟುನಿಟ್ಟಾದರೆ ಜನಸಾಮಾನ್ಯರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾರ್ಗದರ್ಶನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕೊರೊನಾ ಸೋಂಕು ತಡೆಯ ಟಾಸ್ಕ್ ಫೋರ್ಸ್ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಧರ್ಮಸೇನ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಕೊಡಗಿನ 6 ಬ್ಲಾಕ್ ಕಾಂಗ್ರೆಸ್ ವಿಭಾಗಗಳಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ ‘ಸಹಾಯ ವಾಣಿ’ ಆರಂಭಿಸಿ, ದೂರವಾಣಿ ಸಂಖ್ಯೆಗಳನ್ನು ಒದಗಿಸಲಾಗಿದೆ. ಆ ಮೂಲಕ ಕೊರೊನಾ ಸಾಂಕ್ರಾಮಿಕ ಸಂಕಷ್ಟದ ಅವಧಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಅಗತ್ಯ ನೆರವನ್ನು ನೀಡುವ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಹಿರಿಯ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಕೆಪಿಸಿಸಿ ಸದಸ್ಯೆ ಕೆ.ಪಿ.ಚಂದ್ರಕಲಾ ಹಾಗೂ ಜಿಲ್ಲಾ ಖಜಾಂಚಿ ಹೆಚ್.ಎಂ.ನಂದಕುಮಾರ್ ಉಪಸ್ಥಿತರಿದ್ದರು.
(ಕೆಸಿಐ,ಎಸ್.ಎಚ್)

Leave a Reply

comments

Related Articles

error: