ದೇಶಪ್ರಮುಖ ಸುದ್ದಿ

ವಿಶ್ವಾಸ ಮತ ಪರೀಕ್ಷೆಯಲ್ಲಿ ಗೆದ್ದ ಗೋವಾ ಸಿಎಂ ; ಕಾಂಗ್ರೆಸ್‍ಗೆ ನಿರಾಸೆ

ಪಣಜಿ : ಗೋವಾ ನೂತನ ಸಿಎಂ ಮನೋಹರ್ ಪರಿಕ್ಕರ್ ಅವರು ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದಿದ್ದಾರೆ. ಕುತೂಹಲ ಕೆರಳಿಸಿದ್ದ ಗೋವಾ ವಿಶ್ವಾಸ ಮತ ಯಾಚನೆ ವೇಳೆ ನೂತನ ಸಿಎಂ ಮನೋಹರ್ ಪರಿಕ್ಕರ್ ಅವರ ಪರ ಒಟ್ಟು 22 ಮತಗಳು ಬಂದಿದ್ದು, ವಿರುದ್ಧ 16 ಮತಗಳು ಚಲಾವಣೆಯಾಗಿದೆ. ಓರ್ವ ಶಾಸಕ ಗೈರಾಗಿದ್ದರು.

ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮದ್ದರೆ, 13 ಸ್ಥಾನಗಳನ್ನು ಗೆದ್ದ ಬಿಜೆಪಿ 2ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ ಪಕ್ಷೇತರರ ಬೆಂಬಲ ಪಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು 21 ಸ್ಥಾನಗಳ ಅಗತ್ಯ ಇತ್ತು. 13 ಸ್ಥಾನ ಪಡೆದಿದ್ದ ಬಿಜೆಪಿ, 7 ಪಕ್ಷೇತರರ ಬೆಂಬಲ ಪಡೆದಿದೆ. ಓರ್ವ ಕಾಂಗ್ರೆಸ್ ಶಾಸಕ ಬಿಜೆಪಿಗೆ ಸೇರಿದ್ದು, ಕಾಂಗ್ರೆಸ್ ಸಂಖ್ಯಾ ಬಲ 16ಕ್ಕೆ ಕುಸಿದಿದೆ.

ಬದಲಾದ ರಾಜಕೀಯ ಪರಿಸ್ಥಿತಿ ಹಾಗೂ ತನ್ನದೇ ಶಾಸಕರ ಬಂಡಾಯದಿಂದಾಗಿ ಮೊದಲ ಸ್ಥಾನದಲ್ಲಿದ್ದರೂ ಸರ್ಕಾರ ರಚನೆ ಮಾಡಲಾಗದೇ ಕಾಂಗ್ರೆಸ್ ಹತಾಶೆಗೆ ಜಾರಿದೆ. ಎಂಜಿಪಿ ಮತ್ತು ಗೋವಾ ಫಾರ್ವರ್ಡ್ ಪಕ್ಷಗಳು ಮನೋಹರ್ ಪರಿಕ್ಕರ್ ಅವರಿಗೆ ತಮ್ಮ ಬೆಂಬಲ ಸೂಚಿಸಿ ಪತ್ರ ನೀಡಿದ್ದು, ಮತ್ತೆ ಐದು ವರ್ಷಗಳ ಕಾಲ ಕಾಂಗ್ರೆಸ್ ವಿಪಕ್ಷದಲ್ಲಿ ಕೂರುವಂತಾಗಿದೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತಾದರೂ, ಸುಪ್ರೀಂ ಕೋರ್ಟ್ ಕೂಡ ವಿಶ್ವಾಸ ಮತ ಯಾಚನೆ ಮಾಡಿ ಬೆಂಬಲ ಸಾಬೀತು ಪಡೆಸುವಂತೆ ಪರಿಕ್ಕರ್ ಅವರಿಗೆ ನಿರ್ದೇಶಿಸಿತ್ತು.

(ಎನ್‍.ಬಿ.ಎನ್‍)

Leave a Reply

comments

Related Articles

error: