ಮೈಸೂರು

ಕ್ವಾರೆಂಟೈನ್ ವಾಸಿಗಳ ಏಕತಾನತೆ ನಿವಾರಣೆಗೆ ಸ್ಫೂರ್ತಿದಾಯಕ ಭಾಷಣ ನೇರಪ್ರಸಾರ

ಮೈಸೂರು ಜಿಲ್ಲಾಡಳಿತ ಹಾಗೂ ವಾರ್ತಾ ಇಲಾಖೆಯಿಂದ ವಿಶೇಷ ಸರಣಿ ಕಾರ್ಯಕ್ರಮ ಆರಂಭ

ಮೈಸೂರು, ಏ.5:-  ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿ ಎಲ್ಲರೂ ಮನೆಯಲ್ಲೇ ಇರುವಂತಾದ ಮೇಲೆ ಸಮಯದೂಗಿಸುವುದೇ ಬಹುತೇಕರ ಸಮಸ್ಯೆಯಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲೇ ಇದ್ದು, ಸಮಯ ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಸಮಾಜದ ವಿವಿಧ ಗಣ್ಯರಿಂದ ಸ್ಫೂರ್ತಿದಾಯಕ ಸಂದೇಶ ನೀಡುವ, ಈ ಸಂದೇಶವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್ಬುಕ್ ಪೇಜ್ ನಲ್ಲಿ ನೇರ ಪ್ರಸಾರ ಮಾಡುವ ವಿನೂತನ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾಡಳಿತ ಆರಂಭಿಸಿದೆ.

ಕೊರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಸಾವಿರಾರು ಜನರನ್ನು ಕ್ವಾರೆಂಟೈನ್ ಮಾಡಲಾಗಿದೆ. ಮುಖ್ಯವಾಗಿ ಇಂತಹವರಿಗೆ ಉತ್ತಮ ವಾಗ್ಮಿಗಳ ಮೂಲಕ ಸ್ಫೂರ್ತಿದಾಯಕ ಸಂದೇಶವನ್ನು ರವಾನಿಸುವುದು ಈ ಕಾರ್ಯಕ್ರಮ ಉದ್ದೇಶ.

ದೀರ್ಘಕಾಲ ಮನೆಯಲ್ಲೇ ಇರಬೇಕಾದ ಸಂದರ್ಭದಲ್ಲಿ ಒತ್ತಡ ನಿವಾರಣೆ ಹಾಗೂ ಸಮಯ ಸದ್ಬಳಕೆ ಬಗ್ಗೆ ನೆಹರು  ಯುವ ಕೇಂದ್ರ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್‌.ಸಿದ್ದರಾಮಪ್ಪ ಅವರು ಮೊದಲ ಭಾಷಣಕಾರರಾಗಿ   ಏಪ್ರಿಲ್ 6 ರಂದು ಸೋಮವಾರ ಬೆಳಗ್ಗೆ 11.30 ಗಂಟೆಗೆ ಮಾತನಾಡಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಸಾವಿರಾರು ಜನ ಕ್ವಾರೆಂಟೈನ್ ನಲ್ಲಿದ್ದಾರೆ. ಇತರರೂ ಸಹ ಮನೆಯಲ್ಲೇ ಇರಬೇಕಾದ ಸನ್ನಿವೇಶ ಇರುವುದರಿಂದ ಅವರದ್ದೂ ಸಹ ಒಂದು ರೀತಿಯ ಕ್ವಾರೆಂಟೈನ್ ಪರಿಸ್ಥಿತಿ ಇದೆ.

ಮೈಸೂರು ಜಿಲ್ಲಾಡಳಿತದ ವತಿಯಿಂದ ಕೊರೋನಾ ತಡೆಗಟ್ಟಲು ಸ್ವಯಂಸೇವಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸ್ಫೂರ್ತಿದಾಯಕ ಭಾಷಣ ಮಾಡುವವರಿಂದಲೂ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿತ್ತು. ನೂರಾರು ಗಣ್ಯರು ಈ ವಿಭಾಗದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರ ಪೈಕಿ ಸಾಧ್ಯವಾದಷ್ಟು ವಾಗ್ಮಿಗಳಿಂದ ಸ್ಫೂರ್ತಿದಾಯಕ ಸಂದೇಶವನ್ನು ಫೇಸ್ಬುಕ್ ನೇರ ಪ್ರಸಾರ ಮಾಡಲು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮಾರ್ಗದರ್ಶನದಲ್ಲಿ ಯೋಜನೆ ರೂಪಿಸಲಾಗಿದೆ.

ಉತ್ತಮ ವಾಗ್ಮಿಗಳ ಸ್ಪೂರ್ತಿದಾಯಕ ಭಾಷಣದ ನೇರ ಪ್ರಸಾರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಫೇಸ್ಬುಕ್ ಪೇಜ್ https://www.facebook.com/mysorevarthe/ ನಲ್ಲಿ ಏಪ್ರಿಲ್ 6 ರಂದು ಬೆಳಿಗ್ಗೆ 11.30 ಕ್ಕೆ ಪ್ರಾರಂಭವಾಗುತ್ತದೆ. ಈ ಮೇಲಿನ ಲಿಂಕ್ ನಲ್ಲಿ ನೀವು ಕೂಡ ಮನೆಯಲ್ಲಿ ಕುಳಿತು ವೀಕ್ಷಿಸಿಸುವ ಮೂಲಕ ನಿಮ್ಮಲ್ಲಿರುವ ಆತಂಕ ಹಾಗೂ ಬೇಸರವನ್ನು ನಿವಾರಣೆ ಮಾಡಿಕೊಳ್ಳಬಹುದು.

ಇದೇ ಪೇಜ್ ನಲ್ಲಿ ಸ್ಪೂರ್ತಿದಾಯಕ ಭಾಷಣ ಮಾಡುವ ವಾಗ್ಮಿಗಳ ಹೆಸರನ್ನು ಒಂದು ದಿನ ಮುಂಚಿತವಾಗಿ ತಿಳಿಸಲಾಗುವುದು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: