ಮೈಸೂರು

ಪ್ರಧಾನಿ ಮೋದಿಯವರು ನೀಡಿದ ದೀಪ ಬೆಳಗುವ ಕರೆಗೆ ಓಗೊಟ್ಟ ಮೈಸೂರು ಜನತೆ : ಜಗಮಗಿಸಿದ ಮೈಸೂರು

ಮೈಸೂರು,ಏ.5:- ಪ್ರಧಾನಿ ನರೇಂದ್ರ ಮೋದಿಯವರು ಏ.5ರಂದು ರಾತ್ರಿ 9ಗಂಟೆಗೆ ಮನೆಯ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ ಹಣತೆಯ ದೀಪ, ಮೇಣದ ಬತ್ತಿ, ಟಾರ್ಚ್ ಲೈಟ್, ಮೊಬೈಲ್ ಟಾರ್ಚ್ ಲೈಟ್ ಗಳನ್ನು  ಬೆಳಗುವಂತೆ ಕರೆ ನೀಡಿದ್ದರು. ಅದರಂತೆ ಮೈಸೂರಿನ ಜನತೆ ಚಾಚೂ ತಪ್ಪದೇ ಜಾತಿ, ಧರ್ಮವನ್ನೂ ಮೀರಿ ಪಾಲಿಸಿದ್ದು, ಮೈಸೂರು ದೀಪಗಳಿಂದ ಜಗಮಗಿಸುತ್ತಿತ್ತು.

ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತಮ್ಮ ಧರ್ಮಪತ್ನಿ ಮತ್ತು ಪುತ್ರ ನೊಂದಿಗೆ ಸೇರಿ ದೀಪ ಬೆಳಗಿದರು. ಮೈಸೂರು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮತ್ತು ಕಿರಿಯ ಯತಿಗಳು ದೀಪ ಬೆಳಗಿದರು. ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಗಣಪತಿ ಸಚ್ಚಿದಾನಂದ ಶ್ರೀಗಳು ದೀಪ ಬೆಳಗಿದರು.

ಮೈಸೂರಿನ ಸೋನಾರ್ ಬೀದಿಯಲ್ಲಿ ಇರುವ ಅರ್ಜುನ ಅವಧೂತ ಮಹಾರಾಜ್ ಅವರು  ತಮ್ಮ  ಸ್ವ ಗೃಹದ ಮುಂಭಾಗ ನೂರಾರು ದೀಪ ವನ್ನು 9 ನಿಮಿಷಗಳ ಕಾಲ ಉರಿಸಿ ಭಾರತ್ ಮಾತಾ ಕೀ ಜೈ ಎನ್ನುವ ಮೂಲಕ ಬೆಂಬಲ ಸೂಚಿಸಿದರು.

ಸಂಸದ ಪ್ರತಾಪ್ ಸಿಂಹ  ಅವರು ತಮ್ಮ ಕುಟುಂಬದವರೊಂದಿಗೆ ದೀಪ ಹಚ್ಚುವ  ಮೂಲಕ ಏಕತೆಗೆ ಬೆಂಬಲ ಸೂಚಿಸಿದರು. ಶಾಸಕರಾದ ಎಲ್.ನಾಗೇಂದ್ರ ಅವರು ಕುಟುಂಬದವರೊಂದಿಗೆ ದೀಪ ಬೆಳಗಿದರು. ಶಾಸಕ ಎಸ್.ಎ.ರಾಮದಾಸ್ ಕೂಡ ದೀಪ ಬೆಳಗಿದರು.

ಮೈಸೂರಿನ‌ ಚಾಮುಂಡಿಪುರಂ ನಿವಾಸಿ ಅಪೂರ್ವ  ಸುರೇಶ್ ಅವರ ನಿವಾಸದಲ್ಲಿ ವಿಶೇಷವಾಗಿ ಹಣತೆಯಲ್ಲಿ  ದೀಪ ಬೆಳಗಲಾಯಿತು. ಚಾಮುಂಡಿಪುರಂ ಬಡಾವಣೆಯಲ್ಲಿ ಹಿಂದೂ ಮುಸ್ಲಿಂ ಬಾಂಧವರು ಒಟ್ಟಿಗೆ ದೀಪ ಬೆಳಗಿಸುವ ಮೂಲಕ ಭಾರತಮಾತೆ ರಕ್ಷಣೆ ಮತ್ತು ಶಾಂತಿ ಸೌಹಾರ್ದತೆಯ ಸಂದೇಶ ಸಾರಿದರು.

ಮೈಸೂರಿನ ಪ್ರತಿಮನೆಯಲ್ಲೂ, ಓಣಿ ಓಣಿಯಲ್ಲೂ ದೀಪ ಬೆಳಗಿಸಿದ್ದು, ಕಂಡು ಬಂತಲ್ಲದೇ, ಭಾರತ ಮಾತಾಕಿ ಜೈ, ಕೊರೋನಾ ತೊಲಗಲಿ. ನಾವೆಲ್ಲ ಭಾರತೀಯರು ಒಂದೇ ಎಂಬ ಘೋಷಣೆ ಮೊಳಗಿತು.  ಕೊರೋನಾ ಎಂಬ ಕತ್ತಲೆ ಕಳೆದು ಬೆಳಕು ಮೂಡಲಿ ಎಂಬ ಉದ್ದೇಶ ಎಲ್ಲರದ್ದಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: