ಮೈಸೂರು

ಸಮಾಜದ ತಲ್ಲಣಗಳನ್ನು ಕೀರ್ತನೆಯ ಮೂಲಕ ಕಟ್ಟಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ : ಕಾ.ತ.ಚಿಕ್ಕಣ್ಣ

ಭಕ್ತಿ ಮಾರ್ಗವನ್ನು ಅನುಸರಿಸಿ ಅದನ್ನು ಕೇವಲ ಪಾರಾಯಣಕ್ಕೆ ಬಿಡದೆ ಸಮಾಜಮುಖಿಯನ್ನಾಗಿಸಿದ ಶ್ರೇಷ್ಠ ಸಂತ ಕನಕದಾಸ ಎಂದು ರಾಷ್ಟ್ರೀಯ ಸಂತಕವಿ ಕನಕದಾಸ ಅಧ‍್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಸಂತಕವಿ ಕನಕದಾಸ ಅಧ‍್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಮತ್ತು ಮಹಾರಾಣಿ ಮಹಿಳಾ ಕಲಾ ಕಾಲೇಜು, ಕನ್ನಡ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಮೈಸೂರಿನ ಮಹಾರಾಣಿ  ಕಾಲೇಜಿನ ಜಯಲಕ್ಷ್ಮಣ್ಣಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಕನಕ ಓದು’ ಎಂಬ ಎರಡು ದಿನಗಳ ಅರಿವಿನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಕಟ್ಟಲು ಬೇಕಾದ ತಲ್ಲಣ ಕಾವ್ಯಗಳು ಸಂಕಷ್ಟದಲ್ಲಿ ಹುಟ್ಟುತ್ತವೆ. ಅಂತೆಯೇ ಅಂದು ಸಮಾಜದಲ್ಲಿದ್ದ ಜಾತಿ ಸಂಘರ್ಷಗಳು ಕನಕದಾಸ ಮತ್ತು ಅವನೊಳಗಿರುವ ಕವಿಯನ್ನು ಎಚ್ಚರಿಸಿದವು. ಹಣ,ಅಧಿಕಾರ,ಅಹಂಕಾರ, ಕೌಟುಂಬಿಕ ಸಂಬಂಧಗಳನ್ನು ಕಳೆದುಕೊಂಡು, 16 ನೇ ಶತಮಾನದಲ್ಲಿ ಭಕ್ತಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಮನುಷ್ಯನ ಸಂಕಷ್ಟಗಳನ್ನು, ಸಮಾಜದ ತಲ್ಲಣಗಳನ್ನು ತನ್ನ ಕೀರ್ತನೆಗಳ ಮೂಲಕ ಕಟ್ಟುವ ಕೆಲಸ ಮಾಡುತ್ತಾನೆ. ಕಾಗಿನೆಲೆ ಆದಿಕೇಶವ ಕೇವಲ ಕನಕದಾಸನ ವಿಗ್ರಹ ಮೂರ್ತಿಯಲ್ಲ.ಅದು ಅವನ ಆತ್ಮಸಾಕ್ಷಿಯೂ ಹೌದು. ಈ ಕಾರಣಕ್ಕಾಗಿಯೇ ಕನಕನನ್ನು ಓದಬೇಕು ಎಂದರು.

ಕನದಾಸ ಕನ್ನಡದ ಮನಸ್ಸಿನಲ್ಲಿ ಬೆರೆತುಹೋಗಿದ್ದಾನೆ. ಒಬ್ಬ ಕವಿಯಾಗಿ, ದಾರ್ಶನಿಕನಾಗಿ ನಮ್ಮ ಜೊತೆಯಲ್ಲಿದ್ದಾನೆ.ಆತನನ್ನು ಎಲ್ಲಾ ಅರ್ಥದಲ್ಲಿ ವಿಶ್ಲೇಷಣೆ ಮಾಡಬೇಕು. ಅದಕ್ಕಾಗಿಯೇ ನಾಡಿನ ಭವಿಷ್ಯ ಕಟ್ಟುವ ಆಶಾಕಿರಣಗಳಾದ ನೀವು ಕನಕದಾಸನ ಕೀರ್ತನೆಗಳನ್ನು ಓದಿ,ಅವುಗಳ ಸತ್ವವನ್ನು ಅರಿಯಬೇಕು ಎಂದು ಕಿವಿಮಾತು ಹೇಳಿದರು.

ಶಿಬಿರದ ನಿರ್ದೇಶಕ ಡಾ.ಚಿಕ್ಕಮಗಳೂರು ಗಣೇಶ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಸಮಾಜದ ಅಸಮಾನ ನೆಲೆಗಳನ್ನು ಹೃದಯವಂತಿಕೆ ಕಣ್ಣಿನಿಂದ ಓದಿದವರು ಸಾಂಸ್ಕೃತಿಕ ನಾಯಕರಾಗುತ್ತಾರೆ. ಅಂತೆಯೇ ಕನಕದಾಸ ಕೂಡ ಒಬ್ಬ ಸಾಂಸ್ಕೃತಿಕ ನಿರ್ಮಾಪಕನಾಗಿದ್ದಾನೆ. ಆತ ತನ್ನ ಕೀರ್ತನೆಗಳ ಮೂಲಕ ಹೃದಯ ಸ್ಪರ್ಶತೆ ನೀಡಿದ್ದಾನೆ ಎಂದರು.

ಇಂದು ಸಮೂಹನಿಷ್ಠ ಓದು ಕಣ್ಮರೆಯಾಗಿ ವ್ಯಕ್ತಿನಿಷ್ಠ ಓದು ಬಂದಿದೆ. ಇದು ಮನುಷ್ಯರನ್ನು ಅಹಂಕಾರಿಗಳನ್ನಾಗಿ ಮಾಡಿದೆ, ಇಂದು ಕೇವಲ ಬುದ್ದಿವಂತಿಕೆಗೆ ಮಾನ್ಯತೆ ನೀಡಿ ಹೃದಯಯವಂತಿಕೆ ಮರೆಯುತ್ತಿದ್ದಾರೆ. ಆಪ್ತ ಓದುಗಳು ನಮ್ಮಿಂದ ದೂರ ಸರಿದಿವೆ. ಈ ಕಾರಣಕ್ಕಾಗಿಯೇ ಮೊದಲು ಸಾಂಸ್ಕೃತಿಕ ಜಾಗತೀಕರಣವಾಗಬೇಕಿದೆ. ಕನಕನ ಚಿಂತನೆಗಳನ್ನು ವಿದ್ಯಾರ್ಥಿಗಳು ಓದಿ ವಿಸ್ತರಿಸಬೇಕಿದೆ. ಓದು ಕೇವಲ ಪಠ್ಯಪುಸ್ತಕದ ಓದಾಗಿರದೆ ಸಾಂಸ್ಕೃತಿಕ ಓದಾಗಬೇಕು ಎಂದು ಹೇಳಿದರು.

ಕನಕದಾಸರ  ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ವಿಜಯ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಕುಲದ ನೆಲೆಯನ್ನು ಹುಡುಕುತ್ತಾ ಹೋದರೆ ಅದಕ್ಕೆ ಉತ್ತರ ಸಿಗುವುದಿಲ್ಲ. ಕನಕದಾಸನ ಭಕ್ತಿ ನಿಷ್ಠೆಗೆ ಯಾವ ಜಾತಿ,ಧರ್ಮ,ಜನಾಂಗಗಳು ತಡಗೋಡೆಗಳಾಗಲಿಲ್ಲ. ಎಲ್ಲವನ್ನೂ ಮೀರಿದ ಶಕ್ತಿಯನ್ನು ಸಮಾಜಕ್ಕೆ ಕೊಟ್ಟ ಉತ್ಕೃಷ್ಠ ದಾಸರು ಕನಕದಾಸರು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ವಿ.ವಸಂತಕುಮಾರ್, ಸಾಹಿತ್ಯ ಸಂಸ್ಕೃತಿಯ ವ್ಯಕ್ತಿಗಳು ಸಮಾಜದ ನೇತೃತ್ವವನ್ನು ವಹಿಸಿಕೊಳ್ಳಬೇಕು. ಅಂತಹ ಸಾಲಿನಲ್ಲಿ ಆಧ‍್ಯಾತ್ಮಿಕ ನಾಯಕ ಕನಕದಾಸ ಸೇರಿಕೊಳ್ಳುತ್ತಾನೆ ಎಂದರು.

ಈ ಶಿಬಿರದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲು ಪ್ರೊ.ಶಿವಸ್ವಾಮಿ, ಪ್ರೊ.ಕೃಷ್ಣಮೂರ್ತಿ, ಕಲಾಶ್ರೀ ಹೆಚ್.ಎಂ. ಪ್ರೊ.ಇಂದ್ರಾಣಿ, ಎಂ.ನಂಜುಂಡಯ್ಯ ಹಾಜರಿದ್ದರು. ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೈಸೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಾರಾಣಿ ಮಹಿಳಾ ಕಲಾ ಕಾಲೇಜು ಹಾಗೂ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿನಿಯರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: