ದೇಶಪ್ರಮುಖ ಸುದ್ದಿ

ಕೊರೊನಾ ವೈರಸ್: ದೇಶದಲ್ಲಿ 4000 ಗಡಿದಾಟಿದ ಸೋಂಕಿತರ ಸಂಖ್ಯೆ

ನವದೆಹಲಿ,ಏ.6-ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 4000 ಗಡಿದಾಟಿದೆ. ಕಳೆದ 12 ಗಂಟೆಗಳಲ್ಲಿ 490 ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4067ಕ್ಕೆ ಏರಿದೆ. 292 ಮಂದಿ ಗುಣಮುಖರಾಗಿದ್ದಾರೆ.

ಸೋಂಕಿನಿಂದಾಗಿ 109 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಮೂಲಕ ದೇಶದಲ್ಲಿ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ ಶತಕ ದಾಟಿದೆ.

ಒಟ್ಟು 4067 ಸೋಂಕಿತರ ಪೈಕಿ 3666 ಜನರು ಇನ್ನು ಕ್ವಾರೆಂಟೈನ್ ಹಾಗೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 292 ಜನರು ಕೊರೊನಾದಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಉತ್ತರ ಪ್ರದೇಶದಲ್ಲಿ ಏಪ್ರಿಲ್ 3ರಂದು ಸಾವಿಗೀಡಾದ 55ರ ಹರೆಯದ ವ್ಯಕ್ತಿಗೆ ಕೊರೊನಾ ಸೋಂಕು ಇತ್ತು ಎಂದು ತಿಳಿದುಬಂದಿದೆ. ಇದೀಗ ಕೋವಿಡ್‌ನಿಂದಾಗಿ ಉತ್ತರ ಪ್ರದೇಶದಲ್ಲಿ ಸಾವಿಗೀಡಾದವರ ಸಂಖ್ಯೆ 3ಕ್ಕೇರಿದೆ. ಮೃತ ವ್ಯಕ್ತಿಯ ಕುಟುಂಬದ 10 ಸದಸ್ಯರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ.

ರಾಜಸ್ಥಾನದಲ್ಲಿ 8 ಮಂದಿಗೆ ಕೋವಿಡ್ ರೋಗ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 274 ಆಗಿದೆ. ಜುನ್‌ಜುನ್-5, ದುಂಗರ್‌ಪುರ್ -2 ಮತ್ತು ಕೋಟಾದಲ್ಲಿನ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ರಾಜಸ್ಥಾನದ ಆರೋಗ್ಯ ಇಲಾಖೆ ಹೇಳಿದೆ.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ 52 ಹರೆಯದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು, ಕೋವಿಡ್‌ಗೆ ಬಲಿಯಾದವರ ಸಂಖ್ಯೆ 14 ಆಗಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ರಾಜ್ಯದ ರಾಜಧಾನಿಯಲ್ಲಿ ಕೋವಿಡ್‌ಗೆ ಬಲಿಯಾದ ಮೊದಲ ಪ್ರಕರಣ ಇದಾಗಿದೆ.

ಕರ್ನಾಟಕದಲ್ಲಿ ಒಟ್ಟು 151 ಮಂದಿ ಸೋಂಕು ತಗುಲಿದ್ದು, 11 ಮಂದಿ ಗುಣಮುಖರಾಗಿದ್ದು, 4 ಸಾವು ದಾಖಲಾಗಿದೆ. ಸದ್ಯ 136 ಪ್ರಕರಣಗಳು ಚಾಲ್ತಿಯಲ್ಲಿದೆ.

ಜಗತ್ತಿನಾದ್ಯಂತ ಕೋವಿಡ್ ರೋಗಕ್ಕೆ ಬಲಿಯಾದವರ ಸಂಖ್ಯೆ 70,000ಕ್ಕೆ ತಲುಪಿದೆ. ಸುಮಾರು 1.2 ದಶಲಕ್ಷ ಜನರಿಗೆ ಸೋಂಕು ತಗುಲಿದೆ. ಎರಡನೇ ಸ್ಥಾನದಲ್ಲಿ ಸ್ಪೇನ್ ಇದ್ದು 1 ಲಕ್ಷದ 31 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. 12,600ಕ್ಕೂ ಹೆಚ್ಚು ಮಂದಿ ಕೊರೊನಾಗೆ ಇಲ್ಲಿ ಸಾವನ್ನಪ್ಪಿದ್ದಾರೆ.

ಇಟಲಿಯಲ್ಲಿ ಅತೀ ಹೆಚ್ಚು ಮಂದಿ ಈ ಮಾರಕ ವೈರಸ್ ಗೆ ಸಾವನ್ನಪ್ಪಿದ್ದು, ಮೃತಪಟ್ಟವರ ಚಾರ್ಟ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ 1 ಲಕ್ಷದ 28ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. 15,900ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿ ತಿಳಿಸಿದೆ. (ಎಂ.ಎನ್)

Leave a Reply

comments

Related Articles

error: